ಕೋವಿಡ್ ಯೋಧರ ವಿಮಾ ಸುರಕ್ಷೆ ವಾಪಸ್ ಪಡೆದ ಕೇಂದ್ರ!

Update: 2021-04-19 03:52 GMT
ಫೈಲ್ ಫೋಟೊ (source: PTI)

ಹೊಸದಿಲ್ಲಿ, ಎ.19: ದೇಶದಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆಯ ಅಬ್ಬರದ ನಡುವೆಯೇ, ಕೋವಿಡ್ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಡುವ ಆರೋಗ್ಯ ಕಾರ್ಯಕರ್ತರಿಗೆ ನೀಡಿದ್ದ 50 ಲಕ್ಷ ರೂ. ವಿಮಾ ಸುರಕ್ಷೆಯನ್ನು ಕೇಂದ್ರ ಸರ್ಕಾರ ಸದ್ದಿಲ್ಲದೇ ವಾಪಸ್ ಪಡೆದಿದೆ ಎಂದು The New Indian Express ವರದಿ ಮಾಡಿದೆ.

ಕೋವಿಡ್ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ. ವಿಮಾ ಪರಿಹಾರ ನೀಡುವ ಯೋಜನೆ ಮಾರ್ಚ್ 24ಕ್ಕೆ ಮುಕ್ತಾಯವಾಗಿದ್ದು, ಇದನ್ನು ವಿಸ್ತರಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದುವರೆಗೆ ಈ ಯೋಜನೆಯಡಿ 287 ಕ್ಲೇಮ್‌ಗಳನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಕರ್ತವ್ಯದ ವೇಳೆ ಆರೋಗ್ಯ ಕಾರ್ಯಕರ್ತರು ಜೀವ ಕಳೆದುಕೊಳ್ಳುವ ಅಪಾಯ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷ 1.7 ಲಕ್ಷ ಕೋಟಿ ರೂಪಾಯಿ ಕೋವಿಡ್ ಪರಿಹಾರ ಪ್ಯಾಕೇಜ್‌ನ ಭಾಗವಾಗಿ ಈ ಯೋಜನೆ ಜಾರಿಗೆ ತಂದಿತ್ತು. ಸುಮಾರು 22 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಈ ವಿಮಾ ಸುರಕ್ಷೆ ನೀಡಲಾಗುತ್ತಿದೆ ಎಂದು ಸರ್ಕಾರ ಪ್ರಕಟಿಸಿತ್ತು. "ಸಫಾಯಿ ಕರ್ಮಚಾರಿಗಳು, ವಾರ್ಡ್ ಸಹಾಯಕರು, ನರ್ಸ್, ಆಶಾ ಕಾರ್ಯಕರ್ತರು, ಅರೆ ವೈದ್ಯಕೀಯ ಸಿಬ್ಬಂದಿ, ತಂತ್ರಜ್ಞರು, ವೈದ್ಯರು, ವಿಶೇಷ ಪರಿಣತರು ಮತ್ತು ಆರೋಗ್ಯ ಕಾರ್ಯಕರ್ತರು ಇದರಲ್ಲಿ ಸೇರ್ಪಡೆಯಾಗಲಿದ್ದಾರೆ" ಎಂದು ಹೇಳಿತ್ತು. ಈ ಯೋಜನೆಯಡಿ ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರನ್ನೂ ಸೇರಿಸಲಾಗಿತ್ತು.

ಕೋವಿಡ್-19 ಕರ್ತವ್ಯದ ವೇಳೆ ಎಷ್ಟು ಮಂದಿ ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂಬ ಅಧಿಕೃತ ಅಂಕಿಅಂಶ ಇಲ್ಲದಿದ್ದರೂ, ಭಾರತೀಯ ವೈದ್ಯಕೀಯ ಸಂಘದ ಪ್ರಕಾರ ಎರಡನೇ ಅಲೆಯಲ್ಲಿ ಮೂವರು ವೈದ್ಯರು ಸೇರಿದಂತೆ 739 ಮಂದಿ ಎಂಬಿಬಿಎಸ್ ವೈದ್ಯರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ.

ಈ ಯೋಜನೆ ಪರಿಣಾಮಕಾರಿ ಸುರಕ್ಷಾ ಜಾಲವಾಗಿ ಕಾರ್ಯನಿರ್ವಹಿಸಿದೆ ಎಂದು ಶ್ಲಾಘಿಸಿ ಮಾರ್ಚ್ 24ರಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದರು. ವಿಚಿತ್ರವೆಂದರೆ ಅದೇ ದಿನ ಯೋಜನೆಯ ಅವಧಿ ಮುಕ್ತಾಯವಾಗಿದೆ. ಮಾರ್ಚ್ 24ರ ಮಧ್ಯರಾತ್ರಿ ಯೋಜನೆ ಮುಕ್ತಾಯವಾಗಿದೆ. ಕಳೆದ ವರ್ಷದ ಮಾರ್ಚ್ 26ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಯೋಜನೆ ಘೋಷಿಸಿದ್ದು, ಮೊದಲು 90 ದಿನಕ್ಕೆ ಸೀಮಿತವಾಗಿತ್ತು. ಬಳಿಕ ಇದನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿತ್ತು.

ಭೀಕರವೆನಿಸಿದ ಎರಡನೇ ಅಲೆಯ ವಿರುದ್ಧ ಆರೋಗ್ಯ ಕಾರ್ಯಕರ್ತರು ಹೋರಾಟ ನಡೆಸಿರುವ ನಡುವೆಯೇ ಯೋಜನೆ ವಿಸ್ತರಿಸದ ಕೇಂದ್ರ ಸರ್ಕಾರದ ವಿರುದ್ಧ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News