ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಸಭೆ: ಮಸೀದಿಗಳನ್ನು ಬಂದ್ ಮಾಡದಂತೆ ಮುಸ್ಲಿಂ ಶಾಸಕರ ಮನವಿ

Update: 2021-04-19 12:36 GMT

ಬೆಂಗಳೂರು, ಎ.19: ಬೆಂಗಳೂರಿನಲ್ಲಿ ಕೋವಿಡ್19 ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸದಸ್ಯರು ಲಾಕ್ ಡೌನ್ ಮಾಡುವುದು ಬೇಡ ಎಂದು ಆಗ್ರಹಿಸಿದರು. ಲಾಕ್ ಡೌನ್ ಜಾರಿ ಮಾಡಿದರೆ ಜನ ಸತ್ತು ಹೋಗುತ್ತಾರೆ. ಸುಮ್ಮನೇ ಯಾರಲ್ಲೂ ಭಯ ಹುಟ್ಟಿಸುವುದು ಬೇಡ. ಬೇಕಾದರೆ 24 ಗಂಟೆಯೂ ಸೆಕ್ಷನ್ ಜಾರಿ ಮಾಡಿ. ಆದರೆ ಲಾಕ್ ಡೌನ್ ಬೇಡ ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ರಮಝಾನ್ ಹಿನ್ನೆಲೆ ಮಸೀದಿಗಳಲ್ಲಿ ಕೊರೋನ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ. ಪ್ರಾರ್ಥನೆಗೆ ಅವಕಾಶ ನೀಡಬೇಕು. ಮಸೀದಿಗಳನ್ನು ಬಂದ್ ಮಾಡಬೇಡಿ. ಮಾರ್ಗಸೂಚಿ ಅನುಸರಿಸಿ ರಮಝಾನ್ ಹಬ್ಬ ಆಚರಣೆಗೆ ಅವಕಾಶ ಮಾಡಿ ಕೊಡಿ ಎಂದು ಸಭೆಯಲ್ಲಿ ಝಮೀರ್ ಅಹ್ಮದ್, ರಿಝ್ವಾನ್ ಅರ್ಶದ್, ಸಿ.ಎಮ್.ಇಬ್ರಾಹೀಂ ಮನವಿ ಮಾಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ವಸತಿ ಸಚಿವ ವಿ. ಸೋಮಣ್ಣ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಅಬಕಾರಿ ಸಚಿವ ಎಂ. ಟಿ.ಬಿ. ನಾಗರಾಜ್, ತೋಟಗಾರಿಕೆ ಸಚಿವ ಶಂಕರ್, ಬೆಂಗಳೂರಿನ ಸಂಸದರು, ಶಾಸಕರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News