ಕೋವಿಡ್ ನಿಂದ ಮೃತಪಡುವ ಮುಸ್ಲಿಮರ ಅಂತ್ಯಕ್ರಿಯೆಗೆ ಪ್ರತ್ಯೇಕ ಜಾಗ ಕೊಡಿ: ಸರಕಾರಕ್ಕೆ ಝಮೀರ್ ಅಹ್ಮದ್ ಮನವಿ

Update: 2021-04-19 15:05 GMT

ಬೆಂಗಳೂರು, ಎ.19: ಕೋವಿಡ್ ಸೋಂಕಿನಿಂದ ಮೃತಪಡುವ ಮುಸ್ಲಿಮರ ಅಂತ್ಯಕ್ರಿಯೆಗೆ ಪ್ರತ್ಯೇಕ ಜಾಗದ ವ್ಯವಸ್ಥೆಯನ್ನು ರಾಜ್ಯ ಸರಕಾರ ಮಾಡಿಕೊಡಬೇಕು ಎಂದು ಚಾಮರಾಜಪೇಟೆ ಕ್ಷೇತ್ರದ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಮನವಿ ಮಾಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸಾಂಕ್ರಮಿಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ನಗರದ ಶಾಸಕರು, ಸಚಿವರು, ಸಂಸದರ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿಯೂ ನಾನು ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಮಾಡಿದ್ದೆ. ನಮ್ಮ ಧರ್ಮದ ಸಂಪ್ರದಾಯದಲ್ಲಿ ಮೃತದೇಹಗಳನ್ನು ಸುಡುವುದಿಲ್ಲ, ಹೂಳುತ್ತಾರೆ. ಆದುದರಿಂದ, ಕೋವಿಡ್ ಸೋಂಕಿನಿಂದ ಮೃತಪಡುವವರ ಅಂತ್ಯಕ್ರಿಯೆಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿಕೊಡಬೇಕು ಎಂದು ಅವರು ಕೋರಿದರು.

ರಾಜ್ಯದಲ್ಲಿ ಈಗ ಲಾಕ್‍ಡೌನ್ ಮಾಡಿದರೆ ಅದನ್ನು ಎದುರಿಸುವಂತಹ ಶಕ್ತಿ ಬಡವರಿಗೆ ಇಲ್ಲ. ಕೊರೋನ ನಿಯಂತ್ರಿಸಲು ಲಾಕ್‍ಡೌನ್ ಒಂದೇ ಪರಿಹಾರವು ಅಲ್ಲ. ಆದುದರಿಂದ, ಲಾಕ್‍ಡೌನ್ ಬದಲು ರಾತ್ರಿ ಕರ್ಫ್ಯೂವನ್ನೆ ವಿಸ್ತರಿಸಿ. ಇದೀಗ ಪವಿತ್ರ ರಮಝಾನ್ ಮಾಸ ಆರಂಭವಾಗಿದ್ದು, ತರಾವೀಹ್ ನಮಾಝ್ ಅನ್ನು ಸರಕಾರ ನೀಡಿರುವ ಮಾರ್ಗಸೂಚಿಯ ಅನ್ವಯವೇ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿಯಲ್ಲಿ ಸುಮಾರು 15 ಸಾವಿರ ಮಂದಿ ನಮಾಝ್ ನಿರ್ವಹಿಸುವಷ್ಟು ಸ್ಥಳಾವಕಾಶವಿದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಕೇವಲ 5 ಸಾವಿರ ಮಂದಿಗೆ ಮಾತ್ರ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಸರಕಾರದ ಎಲ್ಲ ತೀರ್ಮಾನಗಳಿಗೆ ಬದ್ಧವಾಗಿ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಇದಲ್ಲದೆ, ಪ್ರತಿ ಶಾಸಕರಿಗೂ ಕನಿಷ್ಠ 25 ಹಾಸಿಗೆಗಳು ಮೀಸಲಿರಿಸುವುದು ಉತ್ತಮ. ಇದರಿಂದ ಕ್ಷೇತ್ರದ ಜನರಿಗೆ ಹಾಸಿಗೆಯ ಅಗತ್ಯವಿದ್ದಾಗ ಅದನ್ನು ಕಲ್ಪಿಸಿಕೊಡಲು ಸಹಕಾರಿಯಾಗುತ್ತದೆ ಎಂದು ಝಮೀರ್ ಅಹ್ಮದ್ ಖಾನ್ ನೀಡಿದ ಸಲಹೆಗೆ, ಬೆಂಬಲಿಸಿದ ಶಾಸಕ ರಿಝ್ವಾನ್ ಅರ್ಶದ್, ಶಾಸಕರ ಹೆಸರಿನಲ್ಲಿ ಹಾಸಿಗೆಗಳು ಮೀಸಲಿರಿಸಿದರೆ ಬಡವರಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದರು.

ನಂತರ ಮಾತು ಮುಂದುವರಿಸಿದ ಝಮೀರ್ ಅಹ್ಮದ್ ಖಾನ್, ಕೋವಿಡ್-19ರ ಸೋಂಕಿತರಿಗೆ ಸರಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸಬೇಕು. ಅಲ್ಲದೆ, ರೆಮ್ಡಿಸಿವೆರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರನ್ನು ಬಂಧಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News