ಕೊರೋನ ಪೀಡಿತ ಬಿಜೆಪಿ ಸರಕಾರದಿಂದ ಜನರ ಜೀವ, ಜೀವನ ರಕ್ಷಣೆ ಸಾಧ್ಯವಿಲ್ಲ: ರಕ್ಷಾ ರಾಮಯ್ಯ

Update: 2021-04-19 15:07 GMT

ಬೆಂಗಳೂರು, ಎ.19: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆ ವ್ಯಾಪಕವಾಗಿದ್ದು, ಹಿಂದೆಂದೂ ಇಲ್ಲದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವು ಸಂಭವಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಕೂಡಲೇ ಜನರ ಜೀವ, ಜೀವನ ರಕ್ಷಣೆಗೆ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸಮರೋಪಾದಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ಆಗ್ರಹಿಸಿದ್ದಾರೆ.

ಉಪ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಮುಖ್ಯಮಂತ್ರಿ ಒಳಗೊಂಡಂತೆ ಹಲವರು ಕೊರೋನ ಸೋಂಕಿಗೆ ಒಳಗಾಗಿದ್ದಾರೆ. ಉಪಮುಖ್ಯಮಂತ್ರಿ ಸೇರಿ ಹಲವರು ಹೋಮ್ ಐಸೋಲೇಷನ್‍ನಲ್ಲಿದ್ದಾರೆ. ಆಡಳಿತಾರೂಢ ಬಿಜೆಪಿ ಸರಕಾರವೇ ಕೊರೋನ ಪೀಡಿತವಾಗಿದೆ. ಹೀಗಿರುವಾಗ ಜನ ಸಾಮಾನ್ಯರ ರಕ್ಷಣೆ ಹೇಗೆ ಎನ್ನುವ ಆತಂಕ ಪರಿಸ್ಥಿತಿ ಇದೆ. ಇಂತಹ ಸನ್ನಿವೇಶದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ.

ಈಗಿನ ಗಂಭೀರ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿರುವ ಬಗ್ಗೆಯೇ ಜನರಿಗೆ ಅನುಮಾನ ಮೂಡುತ್ತಿದೆ. ಜನರ ಜೀವ, ಜೀವನ ರಕ್ಷಣೆ ವಿಚಾರದಲ್ಲಿ ಏನು ಮಾಡಬೇಕು ಎಂದು ತೋಚದೆ ಆಡಳಿತ ನಡೆಸುವವರು ದಿಕ್ಕಾಪಾಲಾಗಿದ್ದಾರೆ. ಮುಖ್ಯಮಂತ್ರಿ ಅವರ ಅನುಪಸ್ಥಿತಿಯಲ್ಲಿ ಆರೋಗ್ಯ, ಇನ್ನಿತರ ಇಲಾಖಾ ಸಚಿವರು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ರಕ್ಷಾ ರಾಮಯ್ಯ ದೂರಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನಿಂದ ಮೃತಪಟ್ಟವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಶವಾಗಾರಗಳಲ್ಲಿ ಸೋಂಕಿನಿಂದ ಮೃತರಾದ ಶವಗಳನ್ನು ಸೂಕ್ತ ರೀತಿಯಲ್ಲಿ ಹಸ್ತಾಂತರ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ವಿದ್ಯುತ್ ಚಿತಾಗಾರಗಳಲ್ಲಿ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಸಾಲುಗಟ್ಟಿ ನಿಂತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಮೃತಪಟ್ಟ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಕೊರೋನ ಮರಣ ಮೃದಂಗ ಭಾರಿಸುತ್ತಿದೆ. ನೊಂದವರನ್ನು ಸಂತೈಸಲು ಸಾಧ್ಯವಾಗದೇ ಅತ್ಯಂತ ದುಃಖದ ಸ್ಥಿತಿ ಕಂಡು ಬಂದಿದೆ ಎಂದು ರಕ್ಷಾ ರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಕೊರೋನ ಸೋಂಕಿತರು ಹಾಸಿಗೆಗಳಿಗಾಗಿ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆದಾಡುವ ಸನ್ನಿವೇಶ ಇದೆ. ಸೋಂಕಿತರಿಗೆ ಎಲ್ಲಿಯೂ ಬೆಡ್‍ಗಳು ದೊರೆಯುತ್ತಿಲ್ಲ. ಬಿಬಿಎಂಪಿ, ಕೊರೋನ ಸಹಾವಾಣಿ ಕೇಂದ್ರಗಳು ಸೋಂಕಿಗೆ ಒಳಗಾಗಿರುವ ಸಂಬಂಧಿಕರಿಗೆ ಉತ್ತರ ನೀಡಲು ಸಾಧ್ಯವಾಗದೇ ಕೈ ಚೆಲ್ಲಿ ಕುಳಿತಿವೆ. ವೈದ್ಯಕೀಯ ಆರೈಕೆ ಇಲ್ಲದೇ ಸೋಂಕಿತರು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸೋಂಕಿತರ ರಕ್ಷಣೆಗೆ ಸರಕಾರ ಕೂಡಲೇ ಆರೈಕೆ ಕೇಂದ್ರಗಳನ್ನು ತೆರೆಯಬೇಕು. ಕಳೆದ ವರ್ಷ ಬೆಂಗಳೂರಿನ ತುಮಕೂರು ರಸ್ತೆಯ ಬಿಐಇಸಿ ಸೆಂಟರ್ ನಲ್ಲಿ ದೇಶದ ಅತೀ ದೊಡ್ಡ ಕೊರೋನ ಸೋಂಕಿತರ ಆರೈಕೆ ಕೇಂದ್ರವನ್ನು ಬಿಜೆಪಿ ಸರಕಾರ ಸ್ಥಾಪಿಸಿತ್ತು. ಬಳಿಕ ನೆಪ ಹೇಳಿ ಇದನ್ನು ಮುಚ್ಚಲಾಗಿತ್ತು ಎಂದು ಅವರು ಹೇಳಿದ್ದಾರೆ.

ಒಂದೇ ಕಡೆ 10,100 ಹಾಸಿಗೆ ಸಾಮರ್ಥ್ಯ ಸೃಷ್ಟಿಸಲಾಗಿತ್ತು. ಅಲ್ಲಿ ಸಾಕಷ್ಟು ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಈಗಲೂ ಅದು ಸುಸಜ್ಜಿತವಾಗಿದ್ದರೆ ದಯವಿಟ್ಟು ಈ ಕೇಂದ್ರ ತೆರೆದು ಜನರ ಪ್ರಾಣ ಉಳಿಸಿ. ಈ ಆರೈಕೆ ಕೇಂದ್ರದ ಕಾಮಗಾರಿ ಜುಲೈನಲ್ಲಿ ಪೂರ್ಣಗೊಂಡಿತ್ತು. ಆದರೆ ಸೆ.15ರ ನಂತರ ಬಿಐಇಸಿ ಕೋವಿಡ್ ಕೇರ್ ಸೆಂಟರನ್ನು ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಪುನಃ ಜೀವ ನೀಡಿ. ಸೋಂಕಿತರ ರಕ್ಷಣೆಗೆ ಇಂತಹ ಹಲವು ವ್ಯವಸ್ಥೆಗಳನ್ನು ಸರಕಾರ ಜಾರಿ ಮಾಡಬೇಕು ಎಂದು ರಕ್ಷಾ ರಾಮಯ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News