ಸಾರಿಗೆ ನೌಕರರು- ಸರಕಾರದ ನಡುವೆ ಯಾವುದೇ ಸಂಧಾನ ಪ್ರಕ್ರಿಯೆ ನಡೆದಿಲ್ಲ: ಲಕ್ಷ್ಮಣ ಸವದಿ

Update: 2021-04-19 16:54 GMT

ಬೆಂಗಳೂರು, ಎ.19: ಮುಷ್ಕರ ನಿರತ ಸಾರಿಗೆ ನೌಕರರು ಮತ್ತು ಸರಕಾರದ ನಡುವೆ ಯಾವುದೇ ಸಂಧಾನದ ಪ್ರಕ್ರಿಯೆ ನಡೆದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸೋಮವಾರ ಈ ಕುರಿತು ಮಾಧ್ಯಮ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ಸಾರಿಗೆ ನೌಕರರ ಮುಷ್ಕರದ ಪ್ರಾರಂಭದ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳು ಯಾವುದೇ ಮಾತುಕತೆ, ಸಂಧಾನದ ಅವಶ್ಯಕತೆ ಇರುವುದಿಲ್ಲ. ಮೊದಲು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿ ಎಂದು ತಾಕೀತು ಮಾಡಿದ್ದರು ಎಂದು ತಿಳಿಸಿದ್ದಾರೆ.

ಕೆಲವು ಮುಖಂಡರು ತಾವು ಮುಷ್ಕರ ನಿರತರ ಪರವಾಗಿ ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಗಿ ತಿಳಿಸಿರುತ್ತಾರೆ. ಅದನ್ನು ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಆದರೆ ನಾನು ಬೊಮ್ಮಾಯಿ ಅವರನ್ನು ಈ ಬಗ್ಗೆ ಕೇಳಿದಾಗ ಮುಖ್ಯಮಂತ್ರಿಗಳ ಮಾತನ್ನು ಮೀರಿ ಈಗ ಸಂಧಾನದ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ತಿಳಿಸಿದಂತೆ ಮೊದಲು ಅವರು ಕರ್ತವ್ಯಕ್ಕೆ ಹಾಜರಾಗಲಿ ಎಂದು ಅವರು ತಿಳಿಸಿದ್ದಾರೆ.

ಆದರೆ ಇದನ್ನು ತಿರುಚಿ ಮುಷ್ಕರ ನಿರತ ಸಾರಿಗೆ ನೌಕರರ ಮುಖಂಡರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಿರುವುದು ಸರಿಯಲ್ಲ. ಆದ್ದರಿಂದ, ಇನ್ನೂ ಕಾಲ ಮಿಂಚಿಲ್ಲ ಎಲ್ಲ ಸಾರಿಗೆ ನೌಕರ ಬಂಧುಗಳು ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಹಾನಿ: ಈ ಮುಷ್ಕರದ ನೆಪದಲ್ಲಿ ಈಗಾಗಲೇ ಒಟ್ಟು 110ಕ್ಕೂ ಹೆಚ್ಚು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾರಿಗೆ ನಿಗಮಗಳಿಗೆ ಅಪಾರ ಹಾನಿ ಉಂಟು ಮಾಡಲಾಗಿದೆ. ಸೋಮವಾರವೂ 3 ಬಸ್ಸುಗಳಿಗೆ ಕಲ್ಲು ಹೊಡೆದು, ಕರ್ತವ್ಯಕ್ಕೆ ಬರುತ್ತಿದ್ದ ಇಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು, ತೀವ್ರ ಖಂಡನೀಯ ಎಂದರು.

ಗೂಂಡಾಗಿರಿಯನ್ನು ನಮ್ಮ ಸರಕಾರ ಎಂದಿಗೂ ಸಹಿಸುವುದಿಲ್ಲ ಎಂಬುದನ್ನು ಈ ದುಷ್ಕರ್ಮಿಗಳು ಅರ್ಥಮಾಡಿಕೊಳ್ಳಬೇಕು ಎಂದ ಅವರು, ಸಾರ್ವಜನಿಕರ ಅಮೂಲ್ಯ ಆಸ್ತಿಯಾಗಿರುವ ಈ ಬಸ್ಸುಗಳನ್ನು ಧ್ವಂಸಗೊಳಿಸಲು ಯಾರಿಗೂ ಹಕ್ಕಿಲ್ಲ. ಅಷ್ಟೆ ಅಲ್ಲದೆ, ನಮ್ಮ ಸಾರಿಗೆ ನೌಕರರ ಮಕ್ಕಳು ಮತ್ತು ಕುಟುಂಬದವರನ್ನು ಬೀದಿಗೆ ತಂದು ಭಿಕ್ಷಾಟನೆಗೆ ತಳ್ಳಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರಸ್ತುತ ಸಾರಿಗೆ ವ್ಯವಸ್ಥೆಯಲ್ಲಿ ಸರಕಾರ ಕೈಗೊಂಡಿರುವ ಪರ್ಯಾಯ ವ್ಯವಸ್ಥೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಹತಾಶಗೊಂಡಿರುವ ಕೆಲವು ಮುಷ್ಕರ ನಿರತರು ಸರಕಾರದ ಪ್ರಾಮಾಣಿಕ ಸ್ಪಂದನೆಯ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಸವದಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News