ಪಾಕಿಸ್ತಾನ: ಒತ್ತೆಸೆರೆಯಲ್ಲಿದ್ದ 11 ಪೊಲೀಸರ ಬಿಡುಗಡೆ

Update: 2021-04-19 17:14 GMT

ಲಾಹೋರ್ (ಪಾಕಿಸ್ತಾನ), ಎ. 19: ಫ್ರಾನ್ಸ್ ರಾಯಭಾರಿಯನ್ನು ಉಚ್ಚಾಟಿಸಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿದ್ದ ತೀವ್ರವಾದಿ ಸಂಘಟನೆಯೊಂದರ ಸದಸ್ಯರು ಒತ್ತೆ ಸೆರೆಯಿರಿಸಿಕೊಂಡಿದ್ದ 11 ಪಾಕಿಸ್ತಾನಿ ಪೊಲೀಸ್ ಸಿಬ್ಬಂದಿ ಬಿಡುಗಡೆಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಲಾಹೋರ್‌ನಲ್ಲಿ ರವಿವಾರ ನಡೆದ ಹಿಂಸಾತ್ಮಕ ಪ್ರತಿಭಟನೆಯ ವೇಳೆ ತೆಹ್ರೀಕೆ ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ)ನ ಬೆಂಬಲಿಗರು ಈ ಪೊಲೀಸರನ್ನು ಒತ್ತೆಸೆರೆಯಿರಿಸಿಕೊಂಡಿದ್ದರು.

ಅಪಹೃತರ ಪೈಕಿ ಕೆಲವರ ದೇಹಗಳಲ್ಲಿ ರಕ್ತದ ಕಲೆಗಳು ಮತ್ತು ಜಜ್ಜು ಗಾಯಗಳಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊವೊಂದು ತೋರಿಸಿದೆ.

ಟಿಎಲ್‌ಪಿ ಜೊತೆ ಮಾತುಕತೆ ನಡೆದ ಬಳಿಕ, ಸೋಮವಾರ ಅಪಹೃತ ಪೊಲೀಸರು ಬಿಡುಗಡೆಗೊಂಡಿದ್ದಾರೆ ಎಂದು ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.

ಪಾಕಿಸ್ತಾನ ಸರಕಾರವು ಕಳೆದ ವಾರ ಟಿಎಲ್‌ಪಿಯನ್ನು ಭಯೋತ್ಪಾದಕ ಸಂಘಟನೆ ಎಂಬುದಾಗಿ ಘೋಷಿಸಿ ನಿಷೇಧಿಸಿತ್ತು.

ಒಂದನೇ ಸುತ್ತಿನ ಮಾತುಕತೆಯ ಬಳಿಕ ಪೊಲೀಸರು ಬಿಡುಗಡೆಯಾಗಿದ್ದು, ಎರಡನೇ ಸುತ್ತಿನ ಮಾತುಕತೆಯು ಸೋಮವಾರ ಸಂಜೆ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.

ಫ್ರೆಂಚ್ ರಾಯಭಾರಿಯನ್ನು ಉಚ್ಚಾಟಿಸಲು ಈ ಸಂಘಟನೆಯು ಪಾಕಿಸ್ತಾನ ಸರಕಾರಕ್ಕೆ ಎಪ್ರಿಲ್ 20ರ ಗಡುವು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News