ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ, ಧಾರ್ಮಿಕ ಕೇಂದ್ರಗಳು ಬಂದ್: ರಾಜ್ಯ ಸರಕಾರ ಆದೇಶ

Update: 2021-04-20 17:10 GMT

ಬೆಂಗಳೂರು, ಎ.20: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯ ಸರಕಾರವು ಎ.21ರಿಂದ ಮೇ4ರವರೆಗೆ ಅನ್ವಯವಾಗುವಂತೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಅನ್ನು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಮಂಗಳವಾರ ರಾಜ್ಯಪಾಲ ವಜುಭಾಯಿ ವಾಲ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ರಾಜ್ಯ ಸರಕಾರದ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ.

ಎ.21ರಿಂದ ಪ್ರತಿ ದಿನ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ. ಶನಿವಾರ ಮತ್ತು ರವಿವಾರ ವಾರಾಂತ್ಯದ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಈ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದೆ.

ಶಾಲೆ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಸಂಸ್ಥೆಗಳನ್ನು ಮುಚ್ಚಲಾಗುತ್ತದೆ. ಆನ್‍ಲೈನ್ ಹಾಗೂ ದೂರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಲನಚಿತ್ರ ಮಂದಿರಗಳು, ಶಾಪಿಂಗ್ ಮಾಲ್‍ಗಳು, ಜಿಮ್, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾ ಸಂಕೀರ್ಣಗಳು, ಈಜುಕೊಳಗಳು, ಮನರಂಜನಾ ಪಾರ್ಕ್‍ಗಳು, ಥಿಯೇಟರ್ ಗಳು, ಬಾರ್ ಗಳು, ಸಭಾಂಗಣಗಳನ್ನು ಮುಚ್ಚಲಾಗುತ್ತದೆ.

ಈಜುಕೊಳಗಳನ್ನು ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಅವರಿಂದ ಮಾನ್ಯತೆ ಪಡೆದ ಕ್ರೀಡಾಪಟುಗಳಿಗೆ ತರಬೇತಿಯ ಉದ್ದೇಶದಿಂದ ಮಾತ್ರ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗುವುದು. ಸ್ಟೇಡಿಯಂ ಹಾಗೂ ಆಟದ ಮೈದಾನಗಳನ್ನು ಸಂಘಟನಾತ್ಮಕ ಕ್ರೀಡಾ ಕಾರ್ಯಕ್ರಮ ಹಾಗೂ ತರಬೇತಿಯ ಉದ್ದೇಶದಿಂದ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಧಾರ್ಮಿಕ ಕೇಂದ್ರಗಳು, ಸಾರ್ವಜನಿಕ ಪ್ರಾರ್ಥನಾ ಸ್ಥಳಗಳು ಮುಚ್ಚಲ್ಪಟ್ಟಿರುತ್ತವೆ. ಆದರೆ, ಧಾರ್ಮಿಕ ಕೇಂದ್ರಗಳು ಹಾಗೂ ಪ್ರಾರ್ಥನಾ ಸ್ಥಳಗಳಲ್ಲಿ ಸೇವೆಗೆ ನಿಯೋಜನೆಗೊಂಡಿರುವವರು ಬೇರೆಯವರಿಗೆ ಅವಕಾಶ ಕಲ್ಪಿಸದೆ ತಮ್ಮ  ಕರ್ತವ್ಯವನ್ನು ನಿರ್ವಹಿಸಬಹುದಾಗಿದೆ. ರೆಸ್ಟೋರೆಂಟ್‍ಗಳಲ್ಲಿ ಕೇವಲ ಪಾರ್ಸೆಲ್‍ಗೆ ಅವಕಾಶ ಕಲ್ಪಿಸಲಾಗಿದೆ.

ನಿರ್ಮಾಣ ಕಾಮಕಾರಿಗಳು, ದುರಸ್ತಿ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಾನ್ಸೂನ್ ಪೂರ್ವ ಸಿದ್ಧತೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಕೈಗಾರಿಕಾ ಪ್ರದೇಶಗಳ ಕಾರ್ಯನಿರ್ವಹಣೆಗೆ ಅವಕಾಶವಿದ್ದು, ಕಾರ್ಮಿಕರು ತಮ್ಮ ಸಂಸ್ಥೆಗಳಿಂದ ವಿತರಿಸಿರುವ ಗುರುತಿನ ಚೀಟಿಯನ್ನು ಪ್ರದರ್ಶಿಸಿ ಸಂಚರಿಸಬಹುದಾಗಿದೆ.

ನ್ಯಾಯಬೆಲೆ ಅಂಗಡಿಗಳು, ಆಹಾರ ಪದಾರ್ಥಗಳು, ದಿನಸಿ, ಹಣ್ಣು ಮತ್ತು ತರಕಾರಿ, ಡೈಲಿ ಹಾಗೂ ಹಾಲಿನ ಬೂತ್‍ಗಳು, ಮಾಂಸ, ಮೀನು, ಪಶು ಆಹಾರವನ್ನು ಪೂರೈಸುವ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಹೋಲ್‍ಸೇಲ್ ತರಕಾರಿ, ಹಣ್ಣು ಹಾಗೂ ಹೂವಿನ ಮಾರುಕಟ್ಟೆಗಳು ತೆರೆದ ಪ್ರದೇಶಗಳು ಹಾಗೂ ಆಟದ ಮೈದಾನಗಳಲ್ಲಿ ಕಾರ್ಯನಿರ್ವಹಿಸಬಹುದು.

ಲಾಡ್ಜಿಂಗ್ ಹೊಟೇಲ್‍ಗಳಲ್ಲಿ ಅತಿಥಿಗಳಿಗೆ ಮಾತ್ರ ಸೇವೆ ನೀಡಬಹುದಾಗಿದೆ. ಮದ್ಯದಂಗಡಿಗಳು, ಬಾರ್ ಗಳಲ್ಲಿ ಪಾರ್ಸೆಲ್‍ಗೆ ಅವಕಾಶವಿದೆ. ಆಹಾರ ಸಂಸ್ಕರಣಾ ಘಟಕಗಳ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕುಗಳು, ವಿಮೆ ಕಚೇರಿಗಳು ಹಾಗೂ ಎಟಿಎಂಗಳು ತೆರೆದಿರುತ್ತವೆ. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೆ ಅವಕಾಶವಿದೆ. ಇ-ಕಾಮರ್ಸ್‍ಗೆ ಅವಕಾಶ ಕಲ್ಪಿಸಲಾಗಿದೆ.

ಮಾರ್ಕೆಟಿಂಗ್, ಶೀಥಲಿಕರಣ ಘಟಕ, ಗೋದಾಮುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಭದ್ರತಾ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಕ್ಷೌರದಂಗಡಿ, ಸಲೂನ್, ಬ್ಯೂಟಿ ಪಾರ್ಲರ್ ಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಕೋವಿಡ್ ಸೂಚನೆಗಳನ್ನು ಪಾಲಿಸಬೇಕು. ಇವುಗಳ ಪೈಕಿ ಸಾಧ್ಯವಿದ್ದವರು ಸಿಬ್ಬಂದಿಗಳಿಗೆ ಮನೆಯಿಂದಲೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಬೇಕು.

ಖಾಸಗಿ ಸಂಸ್ಥೆಗಳು, ಕಚೇರಿಗಳು ಕನಿಷ್ಠ ಸಿಬ್ಬಂದಿಯ ಜೊತೆ ಕಾರ್ಯನಿರ್ವಹಿಸಬೇಕು. ಸಾಧ್ಯವಾದಷ್ಟು ಮನೆಯಿಂದಲೆ ಕೆಲಸ ನಿರ್ವಹಿಸಲು ಪ್ರೋತ್ಸಾಹಿಸಬೇಕು. ಅಗತ್ಯ ಸಿಬ್ಬಂದಿಗಳು ಮಾತ್ರ, ಐಟಿ ಹಾಗೂ ಐಟಿಇಎಸ್ ಕಂಪನಿಯ ಸಿಬ್ಬಂದಿಗಳು ಮಾತ್ರ ಕಚೇರಿಯಿಂದ ಕೆಲಸ ನಿರ್ವಹಿಸಬೇಕು. ಟೆಲಿಕಾಂ, ಇಂಟರ್‍ನೆಟ್ ಸೇವೆಯನ್ನು ಒದಗಿಸುವ ಕಂಪೆನಿಗಳು ಮಾತ್ರ ತಮ್ಮ ಸಿಬ್ಬಂದಿಗಳಿಗೆ, ವಾಹನಗಳಿಗೆ 24/7 ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಎಲ್ಲ ಸರಕಾರಿ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ನಿಗಮಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬೇಕು ಹಾಗೂ ಉಳಿದ ಶೇ.50ರಷ್ಟು ಸಿಬ್ಬಂದಿಯನ್ನು ಕೋವಿಡ್ 19 ಕಂಟೈನ್ಮೆಂಟ್ ಹಾಗೂ ನಿರ್ವಹಣೆ ಕೆಲಸಕ್ಕೆ ಬಳಕೆ ಮಾಡಿಕೊಳ್ಳಬೇಕು. ಹೈಕೋರ್ಟ್ ಆದೇಶದಂತೆ ನ್ಯಾಯಾಲಯ ಹಾಗೂ ಅಧಿಕಾರಿಗಳು ನ್ಯಾಯಾಂಗದ ಕೆಲಸಗಳನ್ನು ನಿರ್ವಹಿಸಬೇಕು.

ಪೆಟ್ರೋಲ್, ಡಿಸೇಲ್ ಬಂಕ್, ಗ್ಯಾಸ್ ಸ್ಟೇಷನ್‍ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬಹುದು. ಅಂತರ್ ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. ಅದಕ್ಕಾಗಿ ಪ್ರತ್ಯೇಕ ಪಾಸ್ ಪಡೆಯುವ ಅಗತ್ಯವಿಲ್ಲ. ಮೆಟ್ರೋ, ಕೆಎಸ್ಸಾರ್ಟಿಸಿ, ಬಿಎಂಟಿಸಿ, ಎನ್‍ಇಕೆಎಸ್ಸಾರ್ಟಿಸಿ, ಎನ್‍ಡಬ್ಲ್ಯೂಎಸ್‍ಆರ್‍ಟಿಸಿ, ಖಾಸಗಿ ಬಸ್ಸುಗಳು, ಆಟೋ ರಿಕ್ಷಾ ಸಂಚರಿಸಲು ಅವಕಾಶವಿದೆ.

ಸಾರಿಗೆ ವಾಹನಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ. ಅನಗತ್ಯವಾಗಿ ಸಂಚರಿಸುವ ಖಾಸಗಿ ವಾಹನಗಳಿಗೆ ಕಡಿವಾಣ. ಗೂಡ್ಸ್ ಹಾಗೂ ಕಾರ್ಗೋ ವಾಹನಗಳಿಗೆ ಅವಕಾಶ. ಕಂಟೈನ್ಮೆಂಟ್ ಝೋನ್‍ಗಳ ಹೊರಗೆ ಕೃಷಿ ಹಾಗೂ ಸಂಬಂಧಿತ ಎಲ್ಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮದುವೆಗಳಿಗೆ 50, ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಗರಿಷ್ಠ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News