ದೇಶದಲ್ಲಿ 3 ಲಕ್ಷದ ಸನಿಹಕ್ಕೆ ದೈನಂದಿನ ಕೋವಿಡ್ ಪ್ರಕರಣ: ಒಂದೇ ದಿನ 2 ಸಾವಿರಕ್ಕೂ ಅಧಿಕ ಸಾವು

Update: 2021-04-21 03:37 GMT

ಹೊಸದಿಲ್ಲಿ: ದೇಶದಲ್ಲಿ ಕೊರೋನ ವೈರಸ್‍ನ ಎರಡನೇ ಅಲೆಯ ಅಬ್ಬರ ಮುಂದುವರಿದಿದ್ದು, ಮಂಗಳವಾರ ಇದುವರೆಗಿನ ಗರಿಷ್ಠ ಅಂದರೆ 2.94 ಲಕ್ಷ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಸಾವಿನ ಸಂಖ್ಯೆ ಮೊದಲ ಬಾರಿಗೆ ಎರಡು ಸಾವಿರಕ್ಕಿಂತ ಅಧಿಕವಾಗಿದೆ.

ಭಾರತದಲ್ಲಿ ಮಂಗಳವಾರ 2,94,291 ಪ್ರಕರಣಗಳು ದಾಖಲಾಗಿದ್ದು, ಅಮೆರಿಕದಲ್ಲಿ ಜನವರಿ 8ರಂದು 3,07,570 ಪ್ರಕರಣಗಳು ದಾಖಲಾಗಿದ್ದನ್ನು ಹೊರತುಪಡಿಸಿದರೆ ವಿಶ್ವದ ಯಾವುದೇ ದೇಶದಲ್ಲಿ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ. ಭಾರತದಲ್ಲಿ ಮೊದಲ ಅಲೆಯಲ್ಲಿ ಗರಿಷ್ಠ ಅಂದರೆ 98,795 ಪ್ರಕರಣಗಳು 2020ರ ಸೆಪ್ಟೆಂಬರ್ 17ರಂದು ವರದಿಯಾಗಿದ್ದವು. 

ದೇಶದಲ್ಲಿ ಸೋಂಕು ಧನಾತ್ಮಕತೆ ದರ 19% ಇದ್ದು, ಶೀಘ್ರವೇ ದೇಶದಲ್ಲಿ ದಿನದ ಪ್ರಕರಣ ಮೂರು ಲಕ್ಷದ ಗಡಿ ದಾಟುವ ನಿರೀಕ್ಷೆ ಇದೆ. ದೆಹಲಿಯಲ್ಲಿ ಧನಾತ್ಮಕತೆ ದರ 32% ಇದ್ದು, ಬಂಗಾಳದಂಥ ರಾಜ್ಯಗಳಲ್ಲಿ 25% ಹಾಗೂ ಮಹಾರಾಷ್ಟ್ರ ಮತ್ತು ಜಾರ್ಖಂಡ್‍ನಲ್ಲಿ 20% ಇದೆ. ಸಾವಿನ ಸಂಖ್ಯೆಯೂ ಏರುತ್ತಲೇ ಇದ್ದು, ಮಂಗಳವಾರ ಒಟ್ಟು 2021 ಮಂದಿ ಸೋಂಕಿತರು ಪ್ರಾಣ ಕಳೆದುಕೊಮಡಿದ್ದಾರೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಅಂದರೆ 519 ಮಂದಿ ಮೃತಪಟ್ಟಿದ್ದು, ದೆಹಲಿ (277), ಛತ್ತೀಸ್‍ಗಢ (191), ಉತ್ತರ ಪ್ರದೇಶ (162), ಕರ್ನಾಟಕ (149) ಮತ್ತು ಗುಜರಾತ್ (121) ನಂತರದ ಸ್ಥಾನಗಳಲ್ಲಿವೆ. ಮೊದಲ ಬಾರಿಗೆ ದೇಶದ ಆರು ರಾಜ್ಯಗಳಲ್ಲಿ ಸಾವಿನ ಸಂಖ್ಯೆ 100ಕ್ಕಿಂತ ಅಧಿಕವಾಗಿದೆ.

ದೇಶದಲ್ಲಿ ಎಪ್ರಿಲ್ ತಿಂಗಳ ಮೊದಲ 20 ದಿನಗಳಲ್ಲಿ 34 ಲಕ್ಷ ಪ್ರಕರಣಗಳು ದಾಖಲಾಗಿವೆ. ಕಳೆದ ಏಳು ದಿನಗಳಲ್ಲೇ 17.4 ಲಕ್ಷ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ಇಡೀ ವಿಶ್ವದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಶೇಕಡ 30ರಷ್ಟು ಭಾರತದಿಂದ ವರದಿಯಾಗಿವೆ. ಏಳು ದಿನಗಳಲ್ಲಿ ಪ್ರಕರಣಗಳ ಸರಾಸರಿ ಪ್ರಮಾಣ ಶೇಕಡ 62ರಷ್ಟು ಏರಿಕೆಯಾಗಿರುವುದು ಆತಂಕ ಮೂಡಿಸಿದೆ.

ದೇಶದ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಂಗಳವಾರ ಇದುವರೆಗಿನ ಗರಿಷ್ಠ ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ 28395 ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕ (21794), ಕೇರಳ (19577), ಗುಜರಾತ್ (12206), ರಾಜಸ್ಥಾನ (12201), ತಮಿಳುನಾಡು (10986), ಬಿಹಾರ (10455) ಮತ್ತು ಬಂಗಾಳದಲ್ಲಿ 9819 ಪ್ರಕರಣಗಳು ವರದಿಯಾಗಿವೆ. ಹರ್ಯಾಣ-7811, ತೆಲಂಗಾಳ-5926, ಜಾರ್ಖಂಡ್-4969, ಒಡಿಶಾ- 4761, ಉತ್ತರಾಖಂಡ- 3012, ಜಮ್ಮು ಕಾಶ್ಮೀರ-2030 ಮತ್ತು ಗೋವಾ 1160 ಪ್ರಕರಣಗಳನ್ನು ಕಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News