ಉತ್ತರ ಪ್ರದೇಶ: ನ್ಯಾಯಾಲಯದ ಆವರಣದಲ್ಲೇ ಬಜರಂಗದಳ ಕಾರ್ಯಕರ್ತರ ದಾಂಧಲೆ

Update: 2021-04-21 04:30 GMT
ಸಾಂದರ್ಭಿಕ ಚಿತ್ರ

ಬರೇಲಿ (ಉತ್ತರ ಪ್ರದೇಶ): ಅಪ್ರಾಪ್ತ ವಯಸ್ಸಿನವಳು ಎನ್ನಲಾದ ಯುವತಿಯೊಬ್ಬಳು ಇನ್ನೊಂದು ಕೋಮಿನ ಯುವಕನ ಜತೆ 'ನ್ಯಾಯಾಲಯ ವಿವಾಹ'ಕ್ಕಾಗಿ ನ್ಯಾಯಾಲಯ ಆವರಣಕ್ಕೆ ಬಂದಾಗ ಬಜರಂಗದಳ ಕಾರ್ಯಕರ್ತರು ಗದ್ದಲವೆಬ್ಬಿಸಿ ದಾಂಧಲೆ ನಡೆಸಿದ ಪ್ರಕರಣ ವರದಿಯಾಗಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಯುವತಿಯನ್ನು ಮುಸ್ಲಿಂ ಎಂದು ಬಿಂಬಿಸಿ 'ನ್ಯಾಯಾಲಯ ವಿವಾಹ'ಕ್ಕೆ ಮುಂದಾಗಿರುವುದನ್ನು ವಿರೋಧಿಸುವುದಾಗಿ ಹೇಳಿದ ಬಲಪಂಥೀಯ ಗುಂಪಿನ ಕಾರ್ಯಕರ್ತರು, ಇದು ಲವ್ ಜಿಹಾದ್ ಪ್ರಕರಣ ಎಂದು ಪ್ರತಿಪಾದಿಸಿದರು. 

ಯುವಕನ ಪೋಷಕರು ಹಾಗೂ ಯುವತಿಯನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಯುವಕ ತಪ್ಪಿಸಿಕೊಂಡಿದ್ದಾನೆ. ದೆಹಲಿಯ ಭದ್ರಾಪುರದಲ್ಲಿ ವಾಸವಿರುವ ಯುವತಿಯ ಸಹೋದರನನ್ನು ಕರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಯುವತಿ ಸಹೋದರನ ಮನೆ ಬಿಟ್ಟಿದ್ದಳು. ಈ ಸಂಬಂಧ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.

'ನಾಪತ್ತೆ ಪ್ರಕರಣ ದೆಹಲಿಯಲ್ಲಿ ದಾಖಲಾಗಿದೆ. ದೆಹಲಿ ಪೊಲೀಸರು ಇಲ್ಲಿಗೆ ಆಗಮಿಸಿದ ತಕ್ಷಣ ಅವರಿಗೆ ಯುವತಿಯನ್ನು ಹಸ್ತಾಂತರಿಸಲಾಗುವುದು. ಯುವತಿ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ' ಎಂದು ಸ್ಥಳೀಯ ಮಹಿಳಾ ಠಾಣೆಯ ಇನ್‍ಸ್ಪೆಕ್ಟರ್ ಛವ್ವಿ ಸಿಂಗ್ ಹೇಳಿದ್ದಾರೆ.

ಯುವತಿಯ ಸಹೋದರ ಹೇಳುವಂತೆ ಆಕೆಗೆ 15 ವರ್ಷ ವಯಸ್ಸು. ಆಕೆಗೆ ಬರೇಲಿಯ ಫತೇಹ್‍ಗಂಜ್ ನಿವಾಸಿ 24 ವರ್ಷದ ಯುವಕನ ಪರಿಚಯವಾಗಿತ್ತು. ಇಂದು ಆ ಯುವಕ ತನ್ನ ಪೋಷಕರು ಮತ್ತು ನಕಲಿ ದಾಖಲೆಗಳೊಂದಿಗೆ ಬಂದು ಕೋರ್ಟ್ ವಿವಾಹಕ್ಕೆ ಪ್ರಯತ್ನಿಸಿದ್ದಾಗಿ ಬಜರಂಗದಳ ಕಾರ್ಯಕರ್ತರು ಆಪಾದಿಸಿದ್ದಾರೆ. ಈ ಬಗ್ಗೆ ಸೋಮವಾರ ರಾತ್ರಿ ಮಾಹಿತಿ ಸಿಕ್ಕಿತ್ತು ಎಂದು ಅವರು ಹೇಳಿದ್ದಾರೆ.

ಈ ಯುವಕ ಹಾಗೂ ಆತನ ತಂದೆ 50 ಸಾವಿರ ರೂಪಾಯಿಗೆ ಯುವತಿಯನ್ನು ಮಾರಾಟ ಮಾಡಲು ಹೊರಟಿದ್ದಾಗಿ ಬಜರಂಗದಳ ಪದಾಧಿಕಾರಿ ನೀರಜ್ ಚೌರಾಸಿಯಾ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News