ಮಾರ್ಗಸೂಚಿ ಪಾಲಿಸದಿದ್ದರೆ ಇನ್ನಷ್ಟು ಕಠಿಣ ನಿಯಮ ಜಾರಿ: ಸಚಿವ ಆರ್.ಅಶೋಕ್ ಎಚ್ಚರಿಕೆ

Update: 2021-04-21 11:42 GMT

ಬೆಂಗಳೂರು, ಎ. 21: ಕೋವಿಡ್ ಎರಡನೆ ಅಲೆ ಹಬ್ಬುವುದನ್ನು ತಡೆಗಟ್ಟಲು ರಾಜ್ಯ ಸರಕಾರ ಜಾರಿಗೆ ತಂದಿರುವ ಹೊಸ ಮಾರ್ಗಸೂಚಿಯನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಎಚ್ಚರಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರು ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಇನ್ನೂ 14 ದಿನಗಳ ಕಾಲ ಕೊರೋನ ಸೋಂಕು ಹರಡುವಿಕೆಯ ಸಂಪರ್ಕ ಕೊಂಡಿಯನ್ನು ತಪ್ಪಿಸಿದರೆ ಕಠಿಣ ನಿಲುವುಗಳನ್ನು ತಳೆಯುವುದು ತಪ್ಪಲಿದೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಈಗಾಗಲೇ ನಗರದ ಎಲ್ಲ ಶಾಸಕರು ಹಾಗೂ ವಿಪಕ್ಷ ನಾಯಕರೊಂದಿಗೆ ಚರ್ಚೆ ಮಾಡಿ ಹಲವು ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಶುಕ್ರವಾರ ರಾತ್ರಿಯಿಂದ ರವಿವಾರ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರಲಿದೆ. ಉಳಿದ ದಿನಗಳಲ್ಲಿ ಅಗತ್ಯವಿದ್ದಾಗ ಮಾತ್ರ ಜನರು ಮನೆಯಿಂದ ಹೊರ ಬರಬೇಕು. ಮನಸೋ ಇಚ್ಛೆ ಸಂಚಾರಕ್ಕೆ ಕಡಿವಾಣ ಹಾಕುವುದಿಂದ ಸೋಂಕು ತಡೆಗಟ್ಟಲು ಸಾಧ್ಯ ಎಂದು ಅಶೋಕ್ ಹೇಳಿದರು.

ಶವ ಸಂಸ್ಕಾರಕ್ಕೆ ಜಮೀನು: ತಾವರೆಕೆರೆ ಬಳಿ ನಾಲ್ಕು ಎಕರೆ ಜಾಗ ಗುರುತಿಸಲಾಗಿದ್ದು, ಕೋವಿಡ್‍ನಿಂದ ಮೃತಪಟ್ಟ ಹೆಚ್ಚುವರಿ ಶವಗಳ ದಹನಕ್ಕೆ ಆದೇಶಿಸಲಾಗಿದೆ. ಇದೇ ರೀತಿ ಎಲ್ಲ ಜಿಲ್ಲಾಕಾರಿಗಳಿಗೂ ಸೂಚನೆ ನೀಡಿದ್ದು, ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿರುವ ಸರಕಾರಿ ಭೂಮಿಯನ್ನು ಕೋವಿಡ್‍ನಿಂದ ಮೃತಪಟ್ಟವರ ಸಂಸ್ಕಾರಕ್ಕೆ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲೂ ನಾಲ್ಕೈದು ಕಡೆ ಇಂತಹ ಜಾಗಗಳನ್ನು ಗುರುತಿಸಲಾಗಿದೆ. ಗ್ರಾಮೀಣ ಭಾಗದಿಂದ ಶವಾಗಾರಕ್ಕೆ ಶವಗಳು ಬರುತ್ತಿರುವುದರಿಂದ ಅಂತ್ಯ ಸಂಸ್ಕಾರ ವಿಳಂಬವಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಮೇಲಿನ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಕೋವಿಡ್ ನಿಯಮಗಳ ಪಾಲನೆ ವಿಚಾರದಲ್ಲಿ ಯಾರೂ ಚೌಕಾಸಿ ಮಾಡದೆ ಅನುಷ್ಠಾನಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.

ಬಿಬಿಎಂಪಿ ಆಯುಕ್ತರಿಗೆ ಹಾಸಿಗೆ ಕೊರತೆ ಉಂಟಾಗದಂತೆ ನಿಗಾ ವಹಿಸಲು ಸೂಚಿಸಲಾಗಿದೆ. ಮುಂದಿನ ಎರಡು ತಿಂಗಳ ಕಾಲ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲನೆ ಮಾಡಬೇಕು. ಸರಕಾರ ಕೂಡ ಒಂದು ತಂಡವಾಗಿ ಕೋವಿಡ್ ನಿಯಂತ್ರಿಸಲು ಕೆಲಸ ಮಾಡಲಿದೆ. ಮಹಾರಾಷ್ಟ್ರ ಮತ್ತು ದೆಹಲಿಯಂತೆ ರಾಜ್ಯದಲ್ಲಿ ಕೋವಿಡ್ ಉಲ್ಬಣವಾಗಬಾರದು ಎಂದ ಅವರು, ಕೇವಲ ಎರಡೇ ದಿನದಲ್ಲಿ ಕೋವಿಡ್ ಲಸಿಕೆ ಹಾಗೂ ಆಕ್ಸಿಜನ್ ಕೊರತೆ ನೀಗಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News