ಉರ್ದು ಕವಿ, ನಿವೃತ್ತ ಐಎಫ್‍ಎಸ್ ಅಧಿಕಾರಿ ಸೈಯದ್ ಅಹ್ಮದ್ ಇಸಾರ್ ನಿಧನ

Update: 2021-04-21 14:40 GMT

ಬೆಂಗಳೂರು, ಎ.21: 13ನೇ ಶತಮಾನದ ಪರ್ಷಿಯನ್ ಕವಿ ಮೌಲಾನ ಜಲಾಲುದ್ದೀನ್ ಮುಹಮ್ಮದ್ ರೂಮಿ, ಡಾ.ಅಲ್ಲಮಾ ಇಕ್ಬಾಲ್, ಉಮರ್ ಖಯ್ಯಾಮ್, ಮೌಲಾನ ಸಾದ್, ಶಮ್ಸ್ ತರ್ಬೇಝ್ ಅವರ ಕವಿತೆಗಳು, ಪದ್ಯಗಳನ್ನು ಪರ್ಷಿಯನ್ ಭಾಷೆಯಿಂದ ಉರ್ದು ಭಾಷೆಗೆ ತರ್ಜುಮೆ ಮಾಡಿ ಉರ್ದು ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿ, ನಿವೃತ್ತ ಐಎಫ್‍ಎಸ್ ಅಧಿಕಾರಿ ಸೈಯದ್ ಅಹ್ಮದ್ ಇಸಾರ್(98) ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಸೈಯದ್ ಅಹ್ಮದ್ ಅವರು ತಮ್ಮ ಕಾವ್ಯನಾಮ ‘ಇಸಾರ್’ ಮೂಲಕವೇ ಚಿರಪರಿಚಿತರು. ರೂಮಿ ಅವರ ಕವನ ಸಂಕಲನ ‘ಮಸ್ನವಿ’ಯ ಉರ್ದು ಭಾಷಾಂತರ ಕೃತಿಯನ್ನು ನ್ಯಾಷನಲ್ ಕೌನ್ಸಿಲ್ ಫಾರ್ ದ ಪ್ರಮೋಷನ್ ಆಫ್ ಉರ್ದು ಲ್ಯಾಂಗ್ವೇಜ್ (ಎನ್‍ಸಿಪಿಯುಎಲ್) ಪ್ರಕಟಿಸಲಿದೆ.

1922ರಲ್ಲಿ ಬೆಂಗಳೂರಿನ ಮುನಿರೆಡ್ಡಿಪಾಳ್ಯದಲ್ಲಿರುವ ಮೈಸೂರುಲ್ಯಾಂಸರ್ ನ ಗ್ಯಾರಿಸನ್‍ನಲ್ಲಿ ಜನಿಸಿದ ಸೈಯದ್ ಅಹ್ಮದ್ ಬಾಲ್ಯದಿಂದಲೇ ಓದು ಬರಹದ ಬಗ್ಗೆ ಆಸಕ್ತಿ ಹೊಂದಿದ್ದರು. ಇವರ ತಂದೆ ಭಾರತೀಯ ಸೇನೆಯಲ್ಲಿ ಯೋಧರಾಗಿದ್ದರು.

ಗ್ಯಾರಿಸನ್‍ನಲ್ಲಿರುವ ಮಸೀದಿಯಲ್ಲಿ ಮೊದಲ ಬಾರಿ ರೂಮಿ ಅವರ ಪದ್ಯ ‘ತನ್ ಬಜನ್ ಜುಂಬದ್, ನಾ ಮಿಬೀನಿ ತುಜಾನ್, ಲೇಕಿನ್ ಅಝ್‍ಜುಂಬಿ ದಾನೆ ತನ್ ಜಾನ್ ಬದನ್’ ಅನ್ನು ಸೈಯದ್ ಅಹ್ಮದ್ ಕೇಳಿದರು. ಆನಂತರ ಅವರ ಸಾಹಿತ್ಯ ಆಸಕ್ತಿ ಹೆಚ್ಚಿತ್ತು.

ಚಿಕ್ಕ ವಯಸ್ಸಿನಿಂದಲೆ ಉಮರ್ ಖಯ್ಯಾಮ್, ಶಮ್ಸ್ ತರ್ಬೇಝ್, ಸಾದ್ ಹಾಗೂ ರೂಮಿ ಅವರ ಪದ್ಯಗಳನ್ನು ಸೈಯದ್ ಅಹ್ಮದ್ ಓದುತ್ತಿದ್ದರು. ಉರ್ದು ಹಾಗೂ ಪರ್ಷಿಯನ್ ಲಿಪಿ ಒಂದೇ ರೀತಿಯಲ್ಲಿದ್ದರಿಂದ ಪರ್ಷಿಯನ್ ಅರ್ಥ ಆಗದೇ ಇದ್ದರೂ ಕವಿತೆಗಳನ್ನು, ಪದ್ಯಗಳನ್ನು ಓದುವ ಹವ್ಯಾಸವನ್ನು ಅವರು ರೂಢಿಸಿಕೊಂಡಿದ್ದರು.

ಶಾಲೆಯಲ್ಲಿ ಪರ್ಷಿಯನ್ ಭಾಷೆಯನ್ನು ಅಭ್ಯಾಸ ಮಾಡಿದ್ದರು. ಅಲ್ಲಾಮಾ ಇಕ್ಬಾಲ್ ಅವರ ಸಾಹಿತ್ಯದಿಂದ ಪ್ರೇರಿತರಾಗಿದ್ದ ಅವರು, ಇಕ್ಬಾಲ್ ಅವರ ‘ಅಸ್ರಾರ್-ಎ-ಖುದಿ’ ಪುಸ್ತಕವನ್ನು ಅಂದು 6 ರೂ.ಗಳನ್ನು ಕೊಟ್ಟು ಖರೀದಿ ಮಾಡಲು ಸಾಧ್ಯವಾಗದೆ ನಕಲು ಮಾಡಿಕೊಂಡು ಇಟ್ಟುಕೊಂಡಿದ್ದರು.

ಮುನಿರೆಡ್ಡಿ ಪಾಳ್ಯದಲ್ಲಿರುವ ತಮ್ಮ ಮನೆಯಿಂದ ಸೆಂಟ್ರಲ್ ಕಾಲೇಜಿಗೆ ಕಾಲ್ನಡಿಯಲ್ಲಿ ಹೋಗುತ್ತಿದ್ದ ಸೈಯದ್ ಅಹ್ಮದ್, ಉರ್ದು ಹಾಗೂ ಪರ್ಷಿಯನ್ ಕವಿತೆಗಳನ್ನು ವಾಚಿಸುತ್ತಾ ಸಾಗುತ್ತಿದ್ದರು. ಪದವಿ ಶಿಕ್ಷಣ ಮುಗಿದ ಬಳಿಕ ಅವರು ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿದರು.

ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾದ ವಾಶಿಂಗ್ಟನ್ ವಿವಿಗೆ ಸೇರಿದ ಅವರು, 1954-56ರವರೆಗೆ ಅಲ್ಲಿದ್ದರು. ಉನ್ನತ ಶಿಕ್ಷಣ ಪೂರೈಸಿದ ಬಳಿಕ ಪುನಃ ಅರಣ್ಯ ಇಲಾಖೆಯಲ್ಲಿ ತಮ್ಮ ಸೇವೆಯನ್ನು ಸೈಯದ್ ಅಹ್ಮದ್ ಮುಂದುವರಿಸಿದರು. 1977ರ ಸೆ.17ರಂದ್ದು ಶಿವಮೊಗ್ಗ ಜಿಲ್ಲೆಯ ಸಾಗರದ ಅರಣ್ಯ ಪ್ರದೇಶದಲ್ಲಿರುವಾಗ ಅವರು ಮೊಟ್ಟ ಮೊದಲ ಬಾರಿಗೆ ಉಮರ್ ಖಮ್ಯಾಮ್‍ನ ಪದ್ಯವನ್ನು ಪರ್ಷಿಯನ್ ಇಂದ ಉರ್ದು ಭಾಷೆಗೆ ತರ್ಜುಮೆ ಮಾಡಿದರು.

ಆನಂತರ ಒಂದೇ ವರ್ಷದಲ್ಲಿ 772 ಪರ್ಷಿಯನ್ ಪದ್ಯಗಳನ್ನು ಅವರು ಉರ್ದು ಭಾಷೆಗೆ ಭಾಷಾಂತರ ಮಾಡಿದರು. 1980ರಲ್ಲಿ ಸೈಯದ್ ಅಹ್ಮದ್ ಸೇವೆಯಿಂದ ನಿವೃತ್ತರಾದ ನಂತರ ನಂತರ ಮೌಲಾನ ಸಾದ್ ಹಾಗೂ ಹಫೀಝ್ ಅವರ ಸಾಹಿತ್ಯವನ್ನು ತರ್ಜುಮೆ ಮಾಡುವ ಕೆಲಸಕ್ಕೆ ಕೈ ಹಾಕಿದರು.

1997ರಲ್ಲಿ ಅಲ್ಲಾಮ ಇಕ್ಬಾಲ್ ಅವರ ಪಯಾಮೆ ಮಶ್ರಿಕ್ ಭಾಷಾಂತರ ಕೃತಿ ಪ್ರಕಟವಾಯಿತು. ಅಸ್ರಾರ್-ಎ-ಖುದಿ, ರೂಬೂಝ್-ಎ-ಬೇಖುದಿ, ಜಾವೇದ್ ನಾಮ, ಝುಬೂರೇ ಅಜ್ಮ್, ಪಾಸ್ಚಿದ್ ಬಯಾದ್ ಖರದ್, ಅರ್ಮಘನ್-ಎ-ಹಿಜಾಝ್ ಕೃತಿಗಳು ಪ್ರಕಟವಾಗಿವೆ.

20 ವರ್ಷಗಳ ಕಠಿಣ ಪರಿಶ್ರಮದಿಂದ ಸೈಯದ್ ಅಹ್ಮದ್ ಅವರು ‘ಮಸ್ನವಿ’ಯ 27,720 ಪದ್ಯಗಳನ್ನು, 6 ಸಂಪುಟಗಳಲ್ಲಿ ತರ್ಜುಮೆಗೊಳಿಸುವ ಮೂಲಕ ತಮ್ಮ ಗುರಿಯನ್ನು ಸಾಧಿಸಿದರು. ಇದರ ಜೊತೆಗೆ ಉಮರ್ ಖಯ್ಯಾಮ್, ಸಾದ್ ಹಾಗೂ ತರ್ಬೇಝ್ ಅವರ ಕವಿತೆಗಳನ್ನು ತರ್ಜುಮೆ ಮಾಡಿದ್ದಾರೆ. ಜೊತೆಗೆ ತಮ್ಮ ಸ್ವಂತ ಕವನ ಸಂಕಲನ ‘ತರಾನ ಒ ತರಂಗ್’, ಆತ್ಮಚರಿತ್ರೆಯನ್ನು 2014ರಲ್ಲಿ ಪ್ರಕಟಿಸಿದ್ದರು.

ಕರ್ನಾಟಕ ಹಾಗೂ ಗೋವಾ ವಲಯದ ಇದಾರಾ ಅದಬ್ ಎ ಇಸ್ಲಾಮಿ ಹಫೀಝ್ ಮೆರಾಥಿ ಪ್ರಶಸ್ತಿಯು ಇವರಿಗೆ ಸಂದಿದೆ. 2017ರಲ್ಲಿ ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಉರ್ದು ಅಕಾಡಮಿ, ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರ ಉರ್ದು ಅಕಾಡಮಿಗಳ ಗೌರವಕ್ಕೂ ಸೈಯದ್ ಅಹ್ಮದ್ ಇಸಾರ್ ಪಾತ್ರರಾಗಿದ್ದರು.

ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗ್ಗೆ ಹೃದಯಾಘಾತದಿಂದ ಅವರು ನಿಧನ ಹೊಂದಿದರು. ಮೃತರು ಕುಟುಂಬ ವರ್ಗ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ದಫನ್ ಕಾರ್ಯವನ್ನು ನಗರದ ಖುದ್ದೂಸ್ ಸಾಹೇಬ್ ಖಬರಸ್ಥಾನ್ ನಲ್ಲಿ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News