ಕೋವಿಡ್ ಮರಣಗಳನ್ನು ತಡೆಗಟ್ಟಲು ಕಾಲನಿಗದಿತವಾಗಿ ನಿರ್ದಿಷ್ಟ ಕ್ರಮಗಳಿಗೆ ಆಗ್ರಹಿಸಿ‌ ಕರ್ನಾಟಕ ಜನಾರೋಗ್ಯ ಚಳುವಳಿ ಪತ್ರ

Update: 2021-04-22 10:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶಾದ್ಯಂತ ಕೋವಿಡ್‌ ಸಾಂಕ್ರಾಮಿಕವು ವೇಗವಾಗಿ ಹರಡುತ್ತಿದ್ದು, ದಿನಂಪ್ರತಿ ಮೂರು ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಈ ನಡುವೆ ಕರ್ನಾಟಕ ರಾಜ್ಯದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗುತ್ತಿವೆ. ಈ ಕುರಿತಾದಂತೆ ತಜ್ಷರೊಂದಿಗೆ ಮತ್ತು ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವವರೊಂದಿಗೆ ಸಮಾಲೋಚನೆ ನಡಸಿ,  ಕೋವಿಡ್ ಮರಣಗಳನ್ನು ತಡೆಗಟ್ಟಲು ಕಾಲನಿಗದಿತವಾಗಿ ನಿರ್ದಿಷ್ಟ ಕ್ರಮಗಳಿಗೆ ಆಗ್ರಹಿಸಿ ಕರ್ನಾಟಕ ಜನಾರೋಗ್ಯ ಚಳುವಳಿಯು ರಾಜ್ಯ ಸರಕಾರಕ್ಕೆ ಪತ್ರದ ಮೂಲಕ ಕೆಲ ಪ್ರಮುಖ ಮನವಿಗಳನ್ನು ಮಾಡಿಕೊಂಡಿದೆ.

ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಆರೋಗ್ಯ ಸಚಿವರೇ..

ಪ್ರತಿದಿನ ಕೋವಿಡ್ ರೋಗಿಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಆಕ್ಸಿಜನ್ ಇರುವ ಹಾಸಿಗೆಗಳ ಮತ್ತು ವೆಂಟಿಲೇಟರ್ ಇರುವ ಐಸಿಯು ಹಾಸಿಗೆಗಳ ಕೊರತೆಯಿಂದ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. 

ಮೇ ಮೊದಲ ವಾರದ ಹೊತ್ತಿಗೆ ಸ್ಫೋಟಕ ಪರಿಸ್ಥಿತಿ ಉಂಟಾಗಲಿದೆ ಎಂದು ತಜ್ಞರು ಹೇಳಿರುವುದು ಈಗಾಗಲೇ ವರದಿಯಾಗಿದೆ. ಜೊತೆಗೆ ರೋಗಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಭಾರೀ ದೊಡ್ಡ ಭೀತಿ ಉಂಟಾಗಿದೆ. ಇದನ್ನು ನಿಭಾಯಿಸುವುದು ಸರ್ಕಾರದ ಕರ್ತವ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಕೆಳಗಿನ ಕ್ರಮಗಳನ್ನು ಸರ್ಕಾರ ಈ ತಕ್ಷಣ ಕೈಗೊಳ್ಳಲೇಬೇಕೆಂದು ಆಗ್ರಹಿಸುತ್ತೇವೆ ಮತ್ತು ಪ್ರತಿದಿನ ಈ ಸಂಬಂಧ ವರದಿಯನ್ನು ರಾಜ್ಯದ ಜನರ ಮುಂದೆ ಇಡಬೇಕೆಂದು ಒತ್ತಾಯಿಸುತ್ತೇವೆ

1.ಈಗಿಂದೀಗಲೇ ಸರ್ಕಾರವು ಬೆಂಗಳೂರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜೆನ್ ಇರುವ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಬೆಂಗಳೂರಿನಲ್ಲಿ ದಿನಕ್ಕೆ ಕನಿಷ್ಠ 200 ಮತ್ತು ಜಿಲ್ಲಾ ಕೇಂದ್ರಗಳಲ್ಲಿ ದಿನಕ್ಕೆ 25 ಸಂಖ್ಯೆಯನ್ನು ಹೆಚ್ಚಿಸಬೇಕು.  

2.ಪ್ರತಿದಿನ ಸರ್ಕಾರವು ಎಷ್ಟು ಆಕ್ಸಿಜನ್ ಬೆಡ್ʼಗಳನ್ನು ಹೊಸದಾಗಿ ಎಲ್ಲಿ ಹೆಚ್ಚು ಮಾಡಿದ್ದೇವೆ ಎಂಬುದನ್ನು ಪ್ರಕಟಿಸಬೇಕು.

3.ಬೆಂಗಳೂರಿನಲ್ಲಿ ಪ್ರತಿ ದಿನ ಕನಿಷ್ಠ 5೦೦ ಮತ್ತು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತಲಾ 5೦ರಷ್ಟು ವೆಂಟಿಲೇಟರ್ಗಳನ್ನು ಇನ್ನೊಂದು ವಾರ ಕಾಲ  ಹೆಚ್ಚಿಸಲು ಸಮರೋಪಾದಿ ಕ್ರಮಗಳನ್ನು ತೆಗೆದುಕೊಳ್ಳಬೇಕು.

4.ಆಕ್ಸಿಜನ್ ಕೊರತೆ ಇಲ್ಲವೆಂದು ಸರ್ಕಾರವು ಹೇಳಿರುವುದು ವರದಿಯಾಗಿದೆ. ಅದರ ಮೇಲೆ ವಿಶ್ವಾಸವಿಟ್ಟು, ಸರಬರಾಜಿನಲ್ಲಿ ಸಮಸ್ಯೆ ಆಗದಂತೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಸೋಂಕು ಆದಾಗಲೂ ಪರಿಸ್ಥಿತಿ ಗಂಭೀರವಾಗದಂತೆ ನೋಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಬೇಕು. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.

5. ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆ ಮೊದಲೇ ಇತ್ತು; ಅದರ ಜೊತೆಗೆ ಈಗ ಕೆಲಸದ ಒತ್ತಡ ಹೆಚ್ಚಾಗಿದೆ; ಸ್ವತಃ ಕೋವಿಡ್ ಸೋಂಕಿನಿಂದ ಬಳಲಿ ವಿಶ್ರಾಂತಿಗೆ ತೆರಳುವವರೂ ಇರಬಹುದು. ಹಾಗಾಗಿ ಹೆಚ್ಚಿನ ಜನರನ್ನು ನೇಮಕಾತಿ ಮಾಡಿಕೊಳ್ಳಬೇಕು. ಇದು ವಿಶೇಷ ಪರಿಸ್ಥಿತಿಯಾಗಿದ್ದು, ಮೂವತ್ತು ಸಾವಿರದಷ್ಟು ಇರುವ ಗುತ್ತಿಗೆ ನೌಕರರನ್ನು ಈಗಲಾದರೂ ಗೌರವಯುತವಾಗಿ ನಡೆಸಿಕೊಳ್ಳಬೇಕು.                

6. ರಾಜ್ಯದ ಪ್ರತಿಯೊಂದು ಪಾಲಿಕೆ, ನಗರಸಭೆ, ಪುರಸಭೆ, ಪಂಚಾಯ್ತಿ ಸೇರಿದಂತೆ  ಜನಪ್ರತಿನಿಧಿಗಳು ತುರ್ತು ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ವಿವರಗಳನ್ನು ನೀಡಿ ಅತ್ಯಂತ  ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. 

7. ಚಿಕಿತ್ಸೆಗೆ ಸಂಬಂಧಿಸಿದಂತೆ  ಐಸಿಎಂಆರ್( ICMR) ಅಥವಾ ವಿಶ್ವ ಆರೋಗ್ಯ ಸಂಸ್ಥೆಗಳೂ ಅನುಮೋದಿಸಿರದ ರೆಮೆಡಿಸಿವಿರ್ ಥರದ ಸಂಗತಿಗಳಿಗೆ ಒತ್ತು ನೀಡದಂತೆ ಕ್ರಮ ಕೃಗೊಳ್ಳಬೇಕು.

8. ಯಾರಿಗೆ ಆಕ್ಸಿಜನ್ ಬೆಡ್ ಅಥವಾ ಐಸಿಯು ಬೆಡ್ ಅಗತ್ಯವಿದೆಯೋ ಅವರಿಗೇ ಆದ್ಯತೆಯ ಮೇರೆಗೆ ಸಿಗುವಂತೆ ಮತ್ತು ಈ ವಿಚಾರದಲ್ಲಿ ವಿಐಪಿ ಶಿಫಾರಸ್ಸುಗಳಿಗೆ ಮಣಿಯದಂತೆ ನಿಯಮಾವಳಿಗಳನ್ನು ರೂಪಿಸಿ ಅದರ ಉಸ್ತುವಾರಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು.

ಬೆಂಗಳೂರು ಬಹಳ ಮುಖ್ಯವೇ. ಆದರೆ ಯಾವ ಕಾರಣಕ್ಕೂ ಉಳಿದ ಜಿಲ್ಲಾ ಕೇಂದ್ರಗಳನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಮಹಾರಾಷ್ಟ್ರದಲ್ಲಿ ಮುಂಬಯಿಯ ಆಚೆ ಇತರ ನಗರ ಪಟ್ಟಣಗಳಲ್ಲೂ ದೊಡ್ಡ ಸಮಸ್ಯೆ ಉಂಟಾಗಿದ್ದನ್ನು ಕಾಣುತ್ತಿದ್ದೇವೆ. ಆಕ್ಸಿಜನ್ ಹಾಗೂ ಆಕ್ಸಿಜನ್ ಇರುವ ಹಾಸಿಗೆಗಳು ಎಲ್ಲಾ ಕಡೆ (ತಾಲೂಕು ಮಟ್ಟದವರೆಗೆ) ಇರುವಂತೆ ನೋಡಿಕೊಳ್ಳುವುದು ಇಂದಿನ ಅಗತ್ಯ.

ಅತ್ಯಂತ ಅಗತ್ಯವಿರುವ ಮತ್ತು ಸಾಧ್ಯವೂ ಇರುವ ಈ ಕೆಲಸವನ್ನು ಮಾಡದ ಸರ್ಕಾರವು ನಾಗರಿಕ ಸರ್ಕಾರ ಅಲ್ಲ ಎಂದಾಗಿಬಿಡುತ್ತದೆ. ನಮ್ಮ ರಾಜ್ಯದ ಸರ್ಕಾರವು ಅಂತಹ ಅಪಕೀರ್ತಿಯನ್ನು ತಂದುಕೊಳ್ಳಲಾರದು ಎಂಬ ವಿಶ್ವಾಸವಿದ್ದರೂ, ಇದನ್ನು ಆಗಮಾಡಲೇಬೇಕೆಂದು ಒತ್ತಡ ತರುವುದು ನಮ್ಮ ಕರ್ತವ್ಯವೆಂದು ಭಾವಿಸಿ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ನಮ್ಮ ಕಡೆಯಿಂದ ಮಾಡುತ್ತೇವೆ. ನಾಡಿನ ಎಲ್ಲಾ ಸಂಘಟನೆಗಳು/ವಿರೋಧ ಪಕ್ಷಗಳು/ಮಾಧ್ಯಮ ಸಂಸ್ಥೆಗಳು ಇದು ಎಲ್ಲರ ಬೇಡಿಕೆಗಳ ಪಟ್ಟಿ ಎಂದು ಭಾವಿಸಿ ಕಾರ್ಯಪ್ರವೃತ್ತವಾಗಬೇಕೆಂದು ಕೋರುತ್ತೇವೆ ಎಂದು ಕರ್ನಾಟಕ ಜನಾರೋಗ್ಯ ಚಳುವಳಿಯ ಪರವಾಗಿ ವಿಜಯಕುಮಾರ್‌, ಡಾ. ಅಕ್ಕಮಹಾದೇವಿ ಹಿಮಾಂಶು, ಶ್ರೀನಿಧಿ ಹಾಗೂ ಅಖಿಲಾ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News