ಕೊಡಗು ಜಿಲ್ಲೆಯಾದ್ಯಂತ ಮೇ4 ರವರೆಗೆ ನಿಷೇಧಾಜ್ಞೆ ಜಾರಿ

Update: 2021-04-22 18:40 GMT

ಮಡಿಕೇರಿ, ಎ.22: ಕೊಡಗು ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿರುವ ಕೊರೋನ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಮೇ 4ರವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಕೋವಿಡ್ ಶಿಷ್ಟಾಚಾರ ಕ್ರಮಗಳನ್ನು ಅಂದರೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಿಕೆ ಇತ್ಯಾದಿಗಳ ಬಗ್ಗೆ ನಿರ್ಲಕ್ಷತನ ತೋರುತ್ತಿರುವುದು ಕಂಡುಬಂದಿರುತ್ತದೆ. ಇದರಿಂದ ಕೋವಿಡ್ ಸೋಂಕು ವೇಗವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಜನರ ಒಗ್ಗೂಡುವಿಕೆಗಳನ್ನು ನಿರ್ಬಂಧಿಸುವುದು ಸೂಕ್ತವೆಂದು ಮನದಟ್ಟಾದ ಕಾರಣ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ನಿಷೇಧಾಜ್ಞೆಯು ಮೇ 4ರ ವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಸರ್ಕಾರದ ಆದೇಶದಂತೆ ಅನುಮತಿಸಲಾಗಿರುವ ಕಾರ್ಯಕ್ರಮಗಳಲ್ಲಿ ಸೇರಬಹುದಾದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 4 ಮಂದಿಗಿಂತ ಹೆಚ್ಚಿನ ಮಂದಿ ಒಗ್ಗೂಡುವುದನ್ನು ನಿಷೇಧಿಸಿದೆ. ಆದೇಶವು ಬಸ್ ನಿಲ್ದಾಣಗಳಿಗೆ ಅನ್ವಯಿಸುವುದಿಲ್ಲ. ಅನುಮತಿಸಲಾಗಿರುವ ಸ್ಥಳಗಳಲ್ಲಿ ಪ್ರತಿ ವ್ಯಕ್ತಿಯೂ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಸರ್ಕಾರಿ ಅಧಿಕಾರಿ - ನೌಕರರು ಮತ್ತು ಇಲಾಖಾಧಿಕಾರಿಗಳು ಈ ಆದೇಶವನ್ನು ಪಾಲಿಸಬೇಕು. ಈ ಆದೇಶದ ಉಲ್ಲಂಘನೆಯು ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಕಾಯ್ದೆ 2005ರ ಸೆಕ್ಷನ್ 51 ರಿಂದ 60, ಐಪಿಸಿ ಸೆಕ್ಷನ್ 188 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯೂಲೇಷನ್ 2020ರ ನಿಯಮ 4, 5 ಮತ್ತು 10 ರಂತೆ ದಂಡನೀಯವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News