ರಮೇಶ್ ಜಾರಕಿಹೊಳಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಿಟ್ ಅನುವು: ಕಾಂಗ್ರೆಸ್ ಆರೋಪ

Update: 2021-04-23 12:20 GMT

ಬೆಂಗಳೂರು, ಎ. 23: `ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ' ಎಂಬ ಗಾದೆ ಮಾತಿನಂತೆ ವಿಶೇಷ ತನಿಖಾ ತಂಡ, ರಮೇಶ್ ಜಾರಕಿಹೊಳಿ ಬಯಸಿದಂತೆ ಪ್ರಕರಣದ ವಿಚಾರಣೆಗೆ ಹಾಜರಾಗದಿರಲು ಹಾಗೂ ಪ್ರಕರಣದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಕಾನೂನು ಅನ್ನು ಗಾಳಿಗೆ ತೂರಿ ಆರೋಪಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿರುವುದು ಸ್ಪಷ್ಟ' ಎಂದು ಕೆಪಿಸಿಸಿ ವಕ್ತಾರ ಸಂಕೇತ ಏಣಗಿ ಆರೋಪಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜನಸಾಮಾನ್ಯರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಮತ್ತೊಂದು ನ್ಯಾಯ ಎನ್ನುವ ರೀತಿಯಲ್ಲಿ ಸಿಟ್ ಸಿಡಿ ಪ್ರಕರಣದಲ್ಲಿ ಪಕ್ಷಪಾತಿ ಧೋರಣೆ ಮತ್ತು ತಾತ್ಸಾರ ಮನೋಭಾವನೆ ಅನುಸರಿಸುತ್ತಿದೆ. ಸಿಡಿ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿ ಅವರಿಗೆ ವಿಶೇಷ ವಿನಾಯಿತಿ ನೀಡಿರುವುದು ಸ್ಪಷ್ಟವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ದೂರಿದ್ದಾರೆ.

ಕ್ರಿಮಿನಲ್ ಮೊಕದ್ದಮೆಯ ತನಿಖಾಧಿಕಾರಿಗಳು ಈ ರೀತಿಯ ವಿಶೇಷ ವಿನಾಯಿತಿಯನ್ನು ಸಾಮಾನ್ಯ ಪ್ರಕರಣದಲ್ಲಿ ಆರೋಪಿಗೆ ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡುವರೇ? ಎಂದು ಪ್ರಶ್ನಿಸಿರುವ ಅವರು, ಆರೋಪಿ ಕೊರೋನ ನೆಪದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಸಂತ್ರಸ್ತೆಯ ಹೇಳಿಕೆ ಪಡೆದು ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆಗೆ ಒಳಪಡಿಸದಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಸಂಕೇತ ಏಣಗಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News