ಕರ್ಫ್ಯೂ ಅವಧಿಯಲ್ಲಿ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಅಡ್ಡಿ ಇಲ್ಲ: ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್

Update: 2021-04-23 16:14 GMT

ಚಿಕ್ಕಮಗಳೂರು, ಎ.23: ಕೊರೋನ ಸೋಂಕಿನ ಎರಡನೇ ಅಲೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಕೈಗೊಂಡಿರುವ ವಾರಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿಯಿಂದಲೇ ಆರಂಭಗೊಂಡಿದ್ದು, ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯಲು ಬರುವ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಅಡ್ಡಿ ಪಡಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ಫ್ಯೂ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ಫ್ಯೂ ಅವಧಿಯಲ್ಲಿ ಸಭೆ, ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ವಿನಾಕಾರಣ ಜನರು ತಿರುಗಾಡುವಂತಿಲ್ಲ. ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದ್ದು, 50 ಮಂದಿ ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದ ಅವರು, ಕರ್ಫ್ಯೂ ಅವಧಿಯಲ್ಲಿ ಪ್ರತೀ ಹೋಬಳಿಗೊಂದರಂತೆ ಮೊಬೈಲ್ ಸ್ಕ್ವಾಡ್ ಕೆಲಸ ನಿರ್ವಹಿಸಲಿದ್ದು, ಈ ಸ್ಕ್ವಾಡ್ ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದವರಿಗೆ ದಂಡ ವಿಧಿಸಲಿದೆ. ಇದರೊಂದಿಗೆ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ತಂಡಗಳೂ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್‍ಪೋಸ್ಟ್ ತೆರೆದು ಕಾರ್ಯನಿರ್ವಹಿಸುವ ಕೆಲಸವನ್ನು ಪೊಲೀಸ್ ಇಲಾಖೆ ನಿರ್ವಹಿಸಲಿದೆ ಎಂದರು.

ಸರಕಾರ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬೆಳಗ್ಗೆ 6ರಿಂದ 10ರವರೆಗೆ ಸರಕಾರಿ ಬಸ್‍ಗಳು ಶೇ.50ರಷ್ಟು ಸೀಟುಗಳೊಂದಿಗೆ ಸಂಚರಿಸಲಿವೆ. ದಿನಸಿ ಅಂಗಡಿ, ಹಾಲು, ಜೀವರಕ್ಷಕ ಔಷಧ ಅಂಗಡಿಗಳು, ತರಕಾರಿ, ಮೀನು, ಮಾಂಸದ ಅಂಗಡಿಗಳು ತೆರೆದಿರುತ್ತವೆ. ಹೊಟೇಲ್‍ಗಳಲ್ಲಿ ಕುಳಿತು ಉಪಹಾರ ಮತ್ತು ಊಟ ಮಾಡುವಂತಿಲ್ಲ, ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶ ಇದೆ. ಬಾರ್ ಮತ್ತು ರೆಸ್ಟೋರೆಂಟ್‍ಗಳು ಬಾಗಿಲು ತೆಗೆಯಲಿವೆಯಾದರೂ ಅಲ್ಲಿ ಕುಳಿತ ಮದ್ಯ ಸೇವಿಸುವಂತಿಲ್ಲ, ಖರೀದಿಸಿ ಮನೆಗೆ ಕೊಂಡೊಯ್ಯಬಹುದು ಎಂದರು.

ಕಲ್ಯಾಣ ಮಂಟಪ ಮತ್ತು ಧಾರ್ಮಿಕ ಮುಖಂಡರ ಸಭೆ ನಡೆಸಲಾಗಿದೆ. ಅವರು ಕೊರೋನ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಒಪ್ಪಿಗೆ ನೀಡಿದ್ದಾರೆ. ಬೆಂಗಳೂರು ಪರಿಸ್ಥಿತಿಯನ್ನು ನೋಡಿಯಾದರೂ ಸಾರ್ವಜನಿಕರು ಸ್ವತಃ ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕಿದೆ. ಅಂಗಡಿ ಮುಂಗಟ್ಟುಗಳ ಬಂದ್‍ನಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂಬುದು ತಿಳಿದಿದೆ. ಆದರೆ, 15 ದಿನಗಳಲ್ಲಿ ಪರಿಸ್ಥಿತಿ ಸುಧಾರಣೆಗೆ ಬಂದರೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ನುಡಿದರು.

ಲಸಿಕೆ- ಆಮ್ಲಜನಕ ಕೊರತೆಯಿಲ್ಲ: ಜಿಲ್ಲೆಯಲ್ಲಿ ಕೊರೋನ ಸೋಂಕು ತಡೆಗೆ ನೀಡುವ ಚುಚ್ಚುಮದ್ದುಗಳ ಕೊರತೆ ಉಂಟಾಗಿಲ್ಲ, ಪ್ರತಿದಿನ 5ರಿಂದ 10 ಸಾವಿರ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರೇ ಮುಂದೆ ಬಂದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಸಭೆ ನಡೆಸಿದ್ದು, ಶೇ.50ರಷ್ಟು ಹಾಸಿಗೆಗಳನ್ನು ನೀಡಲು ಮುಂದೆ ಬಂದಿದ್ದಾರೆ. ಆಕ್ಸಿಜನ್‍ಗೂ ಕೊರತೆಯಿಲ್ಲ, ಶುಕ್ರವಾರ ಬೆಳಗ್ಗೆ ಒಂದು ಲೋಡ್ ಆಕ್ಸಿಜನ್ ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

980 ಸಕ್ರಿಯ ಪ್ರಕರಣಗಳು: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 980 ಸಕ್ರಿಯ ಪ್ರಕರಣಗಳಿವೆ. 156 ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 5 ಮಂದಿ ಐಸಿಯುನಲ್ಲಿದ್ದಾರೆ. 68 ಜನರು ಸರಕಾರ ಮತ್ತು 83 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಏಕಾಏಕಿ ಬಂದ್‍ ಮಾಡಿಸಿಲ್ಲ: ನಗರದಲ್ಲಿ ಗುರುವಾರ ಎಂ.ಜಿ.ರಸ್ತೆಯಲ್ಲಿ ಏಕಾಏಕಿ ಬಂದ್ ಮಾಡಿಸಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸರಕಾರದ ಆದೇಶದಂತೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳ ಬಾಗಿಲು ಮುಚ್ಚಿಸಬೇಕಾಗಿತ್ತು. ಆದರೆ ಒಂದು ದಿನ ತಡೆದು ಮರುದಿನ ಸಂಜೆ ಅಂಗಡಿಗಳ ಬಾಗಿಲು ಮುಚ್ಚಿಸಲು ಪೊಲೀಸರು ಮುಂದಾಗಿದ್ದಾರೆ. ಅದಕ್ಕೂ ಮೊದಲು ಬೆಳಗ್ಗೆಯಿಂದಲೇ ನಗರಸಭೆ ವಾಹನದಲ್ಲಿ ಪ್ರಚಾರ ನಡೆಸಲು ಸೂಚಿಸಲಾಗಿತ್ತು. ವರ್ತಕರ ಸಭೆಯನ್ನು ನಗರಸಭೆ ಸಭಾಂಗಣದಲ್ಲಿ ನಡೆಸಿ, ಅವರ ಗಮನಕ್ಕೆ ತಂದು ಸಹಕರಿಸಲು ಕೋರಲಾಗಿತ್ತು. ಮುನ್ಸೂಚನೆ ನೀಡಿಯೇ ಬಂದ್ ಮಾಡಿಸಲಾಗಿದೆ ಎಂದರು.

ಕೊರೋನ ಸೋಂಕಿನ ಬಗ್ಗೆ ಜನರು ಉದಾಸೀನತೆ ತೋರುವುದು ಬೇಡ, ನಿರ್ಲಕ್ಷ್ಯ ಸಲ್ಲದು. ಕುಟುಂಬದ ಯಾವುದೇ ಸದಸ್ಯರಿಗೆ ಜ್ವರ, ಕೆಮ್ಮು ಸೇರಿದಂತೆ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ವೈದ್ಯಕೀಯ ಪರೀಕ್ಷೆಗೆ ಮುಂದಾಗಬೇಕು. ಸೋಂಕಿನ ಗಂಭೀರತೆಯನ್ನು ಅರ್ಥಮಾಡಿಕೊಂಡು ವಿನಾಕಾರಣ ರಸ್ತೆಯಲ್ಲಿ ಅಡ್ಡಾಡದೆ ಸರಕಾರ ಮಾರ್ಗಸೂಚಿಗಳನ್ನು ಕಡ್ಡಾತವಾಗಿ ಪಾಲಿಸಬೇಕು.
- ಕೆ.ಎನ್.ರಮೇಶ್, ಜಿಲ್ಲಾಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News