ಬೆಡ್, ರೆಮ್‍ಡೆಸಿವಿರ್ ಕೊರತೆಗೆ ಹೈಕೋರ್ಟ್ ತೀವ್ರ ಆತಂಕ: ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ನಿರ್ದೇಶನ

Update: 2021-04-23 16:59 GMT

ಬೆಂಗಳೂರು, ಎ.23: ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಳವಾಗುತ್ತಿದ್ದರೂ ಅಗತ್ಯ ಸಂಖ್ಯೆಯಲ್ಲಿ ಬೆಡ್, ರೆಮ್‍ಡೆಸಿವಿರ್, ಆಕ್ಸಿಜನ್ ಲಭ್ಯವಾಗದಿರುವುದಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ಕೂಡಲೇ ಕೊರೋನ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಬಿಎಂಪಿ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಸಲ್ಲಿಸಿದ್ದ ಬೆಡ್ ಗಳ ವಿವರ ಒಳಗೊಂಡ ವರದಿ ಗಮನಿಸಿದ ಪೀಠ ಆಂತಕ ವ್ಯಕ್ತಪಡಿಸಿತು. ವರದಿ ಪ್ರಕಾರ ವೆಂಟಿಲೇಟರ್ ಸಹಿತ ಐಸಿಯು ಬೆಡ್‍ಗಳ ಲಭ್ಯತೆ ಕೇವಲ 11 ಇವೆ. ಹೈ ಡಿಪೆಂಡೆನ್ಸಿ ಯೂನಿಟ್ (ಎಚ್‍ಡಿಯು) ಬೆಡ್‍ಗಳ ಸಂಖ್ಯೆ 42 ಇವೆ. ಬೆಂಗಳೂರಿನಲ್ಲಿ ನಿತ್ಯವೂ 20 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಬೆಡ್‍ಗಳ ಲಭ್ಯತೆ ಗಮನಿಸಿದರೆ ಆಂತಕವಾಗುತ್ತದೆ ಎಂದು ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಅಲ್ಲದೇ, ಬಿಬಿಎಂಪಿ ಹಾಗೂ ಸರಕಾರ ಬೆಡ್‍ಗಳ ಸಂಖ್ಯೆ ಹೆಚ್ಚಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹೆಚ್ಚುವರಿ ಬೆಡ್ ಗಳನ್ನು ಗುರುತಿಸಬೇಕು. ಐಸಿಯು, ಎಚ್‍ಡಿಯು ಹಾಗೂ ಜೆನರಲ್ ಬೆಡ್ ನಂತಹ 3 ರೀತಿಯ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.

ಅಲ್ಲದೆ, ಹತ್ತಿರದ ಜಿಲ್ಲಾಸ್ಪತ್ರೆಗಳ, ಸೇನಾ ಆಸ್ಪತ್ರೆಗಳ, ನರ್ಸಿಂಗ್ ಕಾಲೇಜುಗಳ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಆಸ್ಪತ್ರೆಗಳ ಖಾಲಿ ಬೆಡ್‍ಗಳನ್ನು ಬಳಸಿಕೊಳ್ಳಲು ಮತ್ತು ಚಿಕಿತ್ಸೆಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ನೆರವು ಕೋರಬಹುದು ಎಂದು ಸಲಹೆ ನೀಡಿತು. ಮುಂದಿನ ವಿಚಾರಣೆ ವೇಳೆ ಈ ನಿರ್ದೇಶನಗಳ ಅನುಪಾಲನಾ ವರದಿ ಸಲ್ಲಿಸಬೇಕು. ರೆಮ್‍ಡೆಸಿವಿರ್, ಆಕ್ಸಿಜನ್ ಬೇಡಿಕೆ ಹಾಗೂ ಪೂರೈಕೆ ಬಗ್ಗೆ ಹಾಗೂ ಎಷ್ಟು ಹೆಚ್ಚುವರಿ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಎ.27ಕ್ಕೆ ಮುಂದೂಡಿತು.

ನೋಟಿಸ್ ಜಾರಿ: ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಖಾಸಗಿ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿ ಸರಕಾರಕ್ಕೆ ಪತ್ರ ಬರೆದಿತ್ತು. ಈ ವಿಚಾರವಾಗಿ ಅವರಿಂದಲೇ ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಪೀಠ ಫನಾಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ, ಪರಿಸ್ಥಿತಿ ಸುಧಾರಿಸಲು ನೆರವಾಗುವಂತೆ ಸೂಚನೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News