ಎಲ್ಲರಿಗೂ ಲಸಿಕೆ ಕೊಡಿಸುವುದು ನಮ್ಮ ಜವಾಬ್ದಾರಿ: ಸಚಿವ ಡಿ.ವಿ. ಸದಾನಂದಗೌಡ

Update: 2021-04-25 12:02 GMT

ಬೆಂಗಳೂರು, ಎ. 25: ಕೊರೋನ ಎರಡನೆ ಅಲೆ ನಿಯಂತ್ರಿಸಲು ರಾಜ್ಯಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರಕಾರ ಸಿದ್ಧವಿದೆ. ಈಗಾಗಲೇ ಕೇಂದ್ರ ಕರ್ನಾಟಕಕ್ಕೆ ಎಲ್ಲ ನೆರವು ನೀಡಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ರವಿವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಮುಂದಿನ 10 ದಿನ ಕೋವಿಡ್ ಸೋಂಕಿನ ಕಠಿಣ ಪರಿಸ್ಥಿತಿ ಇರಲಿದೆ. ಆ ಬಳಿಕ ಸೋಂಕಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಮೂರನೇ ಅಲೆಗೆ ಹೋಗಬಾರದು ಎಂದರೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

ಆಕ್ಸಿಜನ್ ಮತ್ತು ಲಸಿಕೆ ಕೊರತೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರು ಕೇಂದ್ರದ ಮೇಲೆ ಒತ್ತಡ ಹೇರಿದ್ದರು. ಕೂಡಲೇ ಕೇಂದ್ರ ಸರಕಾರ 1.22 ಲಕ್ಷ ರೆಮ್‍ಡಿಸಿವರ್ ಮತ್ತು ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಂಡಿದೆ. ಎ 30ರ ವರೆಗೆ 3 ಲಕ್ಷ ಲಸಿಕೆ ಬೇಕು ಎಂದು ಕೇಳಿದ್ದು ಅದನ್ನ ಒದಗಿಸಲಾಗಿದೆ ಎಂದರು.

ಕೊರೋನ ಸೋಂಕು ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ, ಸೋಂಕಿನಿಂದ ಸಾವು ಸಂಭವಿಸಿರೋದು ನಮಗೂ ಮನಸ್ಸಿಗೆ ನೋವು ತಂದಿದೆ. ಜನರು ಜಾಗೃತರಾಗಬೇಕು. ರಾಜ್ಯದಲ್ಲಿ ವೀಕೆಂಡ್ ಕಫ್ರ್ಯೂ ಯಶಸ್ವಿಯಾಗಿದೆ. ಇದರ ಫಲಿತಾಂಶ 10 ರಿಂದ 14 ದಿನದ ಬಳಿಕ ಗೊತ್ತಾಗಲಿದೆ. ವಾರಾಂತ್ಯದ ಕಫ್ರ್ಯೂವನ್ನು ವಾರದ ದಿನಗಳಲ್ಲಿ ವಿಸ್ತರಣೆ ಬಗ್ಗೆ ರಾಜ್ಯ ಸರಕಾರ ತೀರ್ಮಾನಿಸಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಕೊರೋನ ನಿಯಂತ್ರಣವನ್ನು ಯಶಸ್ವಿಯಾಗಿ ಮಾಡುತ್ತಿದೆ. ಆದರೆ, ಬೆಂಗಳೂರಿನಲ್ಲಿ ಅತಿಹೆಚ್ಚು ಸೊಂಕು ಕಾಣಿಸಿಕೊಂಡಿದೆ. ಹೀಗಾಗಿ ನಾವು ತುಂಬಾ ಜಾಗೃತರಾಗಿರಬೇಕು ಎಂದ ಅವರು, ಸೋಂಕು ಇನ್ನೂ ಹೆಚ್ಚಾಗುವಂತಹ ಸಾಧ್ಯತೆ ಇದೆ ಎಂದ ತಜ್ಞರು ಹೇಳುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಅಕ್ಸಿಜನ್ ಮತ್ತು ರೆಮ್‍ಡಿಸಿವಿರ್ ಸ್ವಲ್ಪ ಪ್ರಮಾಣದಲ್ಲಿ ಕೊರೆತೆ ಇತ್ತು ಎಂದು ಸದಾನಂದಗೌಡ ಒಪ್ಪಿಕೊಂಡರು. ಸಭೆಯಲ್ಲಿ ಆರೋಗ್ಯ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ನಾರಾಯಣಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News