ರಾಜ್ಯದಲ್ಲಿ ಮುಂದಿನ ಎರಡು ತಿಂಗಳು ಉದ್ಘಾಟನೆ, ಶಂಕುಸ್ಥಾಪನೆ ಇಲ್ಲ: ಸಚಿವ ಆರ್.ಅಶೋಕ್

Update: 2021-04-27 19:11 GMT

ಬೆಂಗಳೂರು, ಎ. 27: ರಾಜ್ಯದಲ್ಲಿ ಮುಂದಿನ ಎರಡು ತಿಂಗಳು ಯಾವುದೇ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳನ್ನ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಇಂದು ರಾತ್ರಿಯಿಂದಲೇ ಜನತಾ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಕೊರೋನ ನಿಯಂತ್ರಿಸುವ ನಿಟ್ಟಿನಲ್ಲಿ ಈ ಮಾರ್ಗ ಸಫಲವಾಗಬೇಕೆಂದರೆ ಸಾರ್ವಜನಿಕರು ನಿಯಮ ಪಾಲಿಸಬೇಕು. ಮನೆಯಲ್ಲೇ ಇದ್ದು, ಅನಗತ್ಯವಾಗಿ ಓಡಾಡದೇ ಸುರಕ್ಷತೆಯನ್ನ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಮಾಹಿತಿ ಎಲ್ಲರಿಗೂ ಲಭ್ಯ: ಸಾರ್ವಜನಿಕರಿಗೆ ಬೆಡ್ ವ್ಯವಸ್ಥೆಯ ಕುರಿತಂತೆ ಸ್ಪಷ್ಟ ಮಾಹಿತಿ ದೊರೆಯುವ ನಿಟ್ಟಿನಲ್ಲಿ ವಿಶೇಷ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಇಂದಿಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆಯನ್ನ ಪಬ್ಲಿಕ್ ಡೊಮೈನ್‍ಗೆ ಹಾಕುವ ಮೂಲಕ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‍ಗಳು ಲಭ್ಯವಿವೆ ಎಂಬುದು ಜನರಿಗೆ ನಿಖರವಾಗಿ ತಿಳಿಯಲಿದೆ. ಈ ಕುರಿತು ತಕ್ಷಣ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ಪ್ರೈವೇಟ್ ಲ್ಯಾಬ್‍ನಲ್ಲಿ ಕೋವಿಡ್ ಟೆಸ್ಟ್ ರಿಪೋರ್ಟ್‍ಗಳನ್ನ ಸಂಬಂಧಿಸಿದವರಿಗೆ ನೀಡಲಾಗುತ್ತಿದೆ. ಆದರೆ, ಅದರ ಮಾಹಿತಿಯನ್ನ ಬಿಬಿಎಂಪಿಯ ವಾರ್ ರೂಮ್‍ಗೆ ನೀಡುತ್ತಿಲ್ಲ. ಈ ಕಾರಣ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಹೀಗೆ ಮಾಡುತ್ತಿರುವ ಪ್ರೈವೇಟ್ ಲ್ಯಾಬ್‍ಗಳಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಮೊದಲು ಮಾಹಿತಿಯನ್ನ ಬಿಬಿಎಂಪಿಯ ಪೋರ್ಟಲ್‍ಗೆ ನೀಡಬೇಕು ಎಂದು ಸೂಚಿಸಲಾಗಿದೆ. ಹಾಗೆಯೇ ಟೆಸ್ಟ್ ರಿಪೋರ್ಟ್‍ಗಳು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಲ್ಯಾಬ್‍ಗೆ ತಕ್ಷಣ ಬಿಬಿಎಂಪಿಯ ಡೇಟಾ ಆಪರೇಟರ್ ಗಳನ್ನು ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಎಲ್ಲ ಸಚಿವರು ಅವರಿಗೆ ಕೊಟ್ಟಿರುವ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಎಲ್ಲರೂ ಶ್ರಮಿಸುತ್ತಿದ್ದಾರೆ. ಸಿದ್ದರಾಮಯ್ಯನವರು ವಿಪಕ್ಷ ನಾಯಕ ಕಾರಣ ಕೇವಲ ವಿರೋಧಿಸಬೇಕು ಎಂಬ ಕಾರಣಕ್ಕೆ ಎಲ್ಲವನ್ನೂ ವಿರೋಧ ಮಾಡುತ್ತಿದ್ದಾರೆ. ನಾವು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವನ್ನ ಪ್ರಾಮಾಣಿಕವಾಗಿ ನಿಭಾಯಿಸುತ್ತೇವೆ ಎಂದು ಅಶೋಕ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News