ಕೋವಿಡ್ ರೋಗಿಗಳ ಮಾರ್ಗದರ್ಶನಕ್ಕೆ ಕಾಲ್ ಸೆಂಟರ್ ನಲ್ಲಿ 1,100 ಸಿಬ್ಬಂದಿ ನಿಯೋಜನೆ: ಡಾ.ಸುಧಾಕರ್

Update: 2021-04-28 06:06 GMT

ಬೆಂಗಳೂರು, ಎ.27: ಮನೆ ಆರೈಕೆಯಲ್ಲಿರುವ ಕೋವಿಡ್ ರೋಗಿಗಳಿಗೆ ಮಾರ್ಗದರ್ಶನ ನೀಡಲು ಕಾಲ್ ಸೆಂಟರ್‍ನಲ್ಲಿ ಒಟ್ಟು 1,100 ಮಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಮಂಗಳವಾರ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈಗಾಗಲೇ ಕಾಲ್ ಸೆಂಟರ್‍ನಲ್ಲಿ 400 ಸಿಬ್ಬಂದಿ ಇದ್ದಾರೆ. ಮನೆ ಆರೈಕೆಯಲ್ಲಿರುವವರಿಗೆ ಕರೆ ಮಾಡಿ ಮಾರ್ಗದರ್ಶನ ನೀಡಲು 11 ಕೋಟಿ ರೂ.ವೆಚ್ಚದಲ್ಲಿ 6 ತಿಂಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಹೊಸ ವ್ಯವಸ್ಥೆ ಮಾಡಲಾಗುವುದು. ಈ ಸಿಬ್ಬಂದಿ ಬೇರೆ ಬೇರೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ 20 ಕೋಟಿ ರೂ. ವೆಚ್ಚದಲ್ಲಿ ಟೆಲಿ ಮೆಡಿಸಿನ್, ವೈದ್ಯಕೀಯ ಸಲಹೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ 2-3 ಸಾವಿರ ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಯನ್ನು 15-20 ದಿನಗಳಲ್ಲಿ ನಿರ್ಮಿಸಲಾಗುವುದು. ವಿಕ್ಟೋರಿಯಾ, ಬೌರಿಂಗ್, ರಾಜೀವ್‍ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ಇಂತಹ ಆಸ್ಪತ್ರೆ ನಿರ್ಮಿಸಲಾಗುವುದು. ಒಂದು ಆಸ್ಪತ್ರೆಯಲ್ಲಿ 200-250 ಹಾಸಿಗೆಗಳಿದ್ದು, ಶೇ.20ರಷ್ಟು ಐಸಿಯು ವೆಂಟಿಲೇಟರ್, ಶೇ.60ರಷ್ಟು ಆಕ್ಸಿಜನ್, ಶೇ.20ರಷ್ಟು ಹೈಫ್ಲೋ ಆಕ್ಸಿಜನ್ ಇರಲಿದೆ. ಎಲ್ಲ ಜಿಲ್ಲೆಗಳಲ್ಲೂ ಈ ವ್ಯವಸ್ಥೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೋವಿಡ್‍ಕೇರ್ ಸೆಂಟರ್: ಪ್ರತಿಜಿಲ್ಲೆಯಲ್ಲಿ 50-100 ಹಾಸಿಗೆಗಳ ಕೋವಿಡ್‍ಕೇರ್ ಸೆಂಟರ್ ನಿರ್ಮಿಸಲಿದ್ದು, ಶೇ.10ರಿಂದ 20ಆಕ್ಸಿಜನ್ ಹಾಸಿಗೆ ಇರಲಿದೆ. ಪ್ರತಿ ಸೆಂಟರ್‍ನಲ್ಲಿ 20 ಹಾಸಿಗೆಗಳಿಗೆ ಪೋರ್ಟಬಲ್ ಆಕ್ಸಿಜನ್ ನೀಡಲಾಗುವುದು. ಒಟ್ಟು 40 ಸಾವಿರ ಪೋರ್ಟಬಲ್ ಆಕ್ಸಿಜನ್ ಆಮದು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಅಥವಾ ಎರಡು ಕೇರ್ ಸೆಂಟರ್ ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಿಕ್ಷಣ ಸಚಿವ ಸುರೇಶ್‍ಕುಮಾರ್ ಉಪಸ್ಥಿತರಿದ್ದರು.

ಮುಂಬೈನಲ್ಲಿ ಕರ್ಫ್ಯೂ ವಿಧಿಸಿದ ಬಳಿಕ ದಿನಕ್ಕೆ 3 ಸಾವಿರ ಪ್ರಕರಣ ಕಂಡುಬರುತ್ತಿದೆ. ಕರ್ಫ್ಯೂ ವಿಧಿಸಿದಾಗ ಸೋಂಕು ಕಡಿಮೆಯಾಗುತ್ತದೆ. ಆದ್ದರಿಂದಲೇ ರಾಜ್ಯ ಸರಕಾರ ಈ ತೀರ್ಮಾನ ಕೈಗೊಂಡಿದೆ. ಜನರು ಹೆಚ್ಚು ಓಡಾಡದೆ ಎಚ್ಚರ ವಹಿಸಬೇಕು. ಕಡಿಮೆ ಲಕ್ಷಣ ಇರುವ ಸೋಂಕಿತರು ಮನೆಯಿಂದ ಹೊರಗೆ ಹೋಗಿ ಹರಡಬಾರದು. ಹಾಗೆಯೇ ಕೋವಿಡ್ ಅಂಕಿ ಅಂಶ ಮುಚ್ಚಿಡುತ್ತಿಲ್ಲ. ಇದರಲ್ಲಿ ರಾಜಕೀಯ ಬೇಡ. ಈ ಸಂದರ್ಭದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಎಂದು ಇರಬಾರದೆಂದು ಎಲ್ಲರಲ್ಲೂ ಮನವಿ ಮಾಡುತ್ತೇನೆ.

-ಡಾ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News