ಗರ್ಭಿಣಿ ಪತ್ನಿ, ಇಬ್ಬರು ಪುಟಾಣಿ ಮಕ್ಕಳ ಸಹಿತ ನಾಲ್ವರ ಕೊಲೆಗೈದ ಪತಿ

Update: 2021-04-29 07:07 GMT
ಕೊಲೆಯಾದ ಇಬ್ಬರು ಮಕ್ಕಳೊಂದಿಗೆ ಆರೋಪಿ ಮಣಿಕಂಠ(File Photo)

ಮೈಸೂರು, ಎ.29: ವ್ಯಕ್ತಿಯೋರ್ವ ತನ್ನ ಗರ್ಭಿಣಿ ಪತ್ನಿ, ಇಬ್ಬರು ಪುಟಾಣಿ ಮಕ್ಕಳು ಹಾಗೂ ಅತ್ತೆಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಸರಗೂರು ತಾಲೂಕಿನಲ್ಲಿ ಬುಧವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ಸರಗೂರು ತಾಲೂಕಿನ ಚಾಮೇಗೌಡನಹುಂಡಿ ಗ್ರಾಮದ ಮಣಿಕಂಠ ಕೊಲೆ ಆರೋಪಿಯಾಗಿದ್ದಾನೆ. ಈತನ ಪತ್ನಿ ಗಂಗಾ (28), ಮಕ್ಕಳಾದ ರೋಹಿತ್(4) ಮತ್ತು ಸಾಮ್ರಾಟ್ (2) ಹಾಗೂ ಅತ್ತೆ ಕೆಂಪಾಜಮ್ಮ(60) ಕೊಲೆಯಾದವರು. ಇವರನ್ನು ಕಬ್ಬಿಣದ ರಾಡ್ ನಿಂದ ಬಲವಾಗಿ ಹೊಡೆದು ಹತ್ಯೆಗೈಯಲಾಗಿದೆ.

ಮಣಿಕಂಠ ಬುಧವಾರ ತಡರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದು, ಈ ವೇಳೆ ಪತ್ನಿ ಜೊತೆ ಜಗಳವಾಡಿದ್ದಾನೆ ಎನ್ನಲಾಗಿದೆ. ಬಳಿಕ ಇದೇ ಕೋಪದಲ್ಲಿ ನಾಲ್ವರನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ನಡುವೆ ಆರೋಪಿ ಮಣಿಕಂಠ ತಲೆ ಮರೆಸಿಕೊಂಡಿದ್ದಾನೆ. 

ಈ ಬಗ್ಗೆ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News