ವಿವಾಹ ಸಮಾರಂಭಕ್ಕೆ ದಾಳಿ ನಡೆಸಿದ ಜಿಲ್ಲಾಧಿಕಾರಿಯಿಂದ ಅನುಚಿತ ವರ್ತನೆ, ಕಿರುಕುಳ: ವಧುವಿನ ಕುಟುಂಬದ ಆರೋಪ

Update: 2021-04-29 08:13 GMT

ಹೊಸದಿಲ್ಲಿ:  ಪಶ್ಚಿಮ ತ್ರಿಪುರಾ  ಜಿಲ್ಲಾ ಮ್ಯಾಜಿಸ್ಟ್ರೇಟ್  ಶೈಲೇಶ್ ಕುಮಾರ್ ಯಾದವ್ ಆವರು ಕೊವಿಡ್  ರಾತ್ರಿ ಕರ್ಫ್ಯೂ ನಿಯಮ ಉಲ್ಲಂಘನೆಯ ಆರೋಪದ ಮೇಲೆ  ವಿವಾಹ ಸಮಾರಂಭವೊಂದನ್ನು ನಿಲ್ಲಿಸಿದ  ಬೆನ್ನಿಗೇ ಅವರು  ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳ ಜತೆಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆಂದು ವಧುವಿನ ಕುಟುಂಬ ಆರೋಪಿಸಿದೆ.

ರಾತ್ರಿ 10 ಗಂಟೆಗೆ ಜಾರಿಯಾಗುವ ಕರ್ಫ್ಯೂ ಉಲ್ಲಂಘಿಸಿದ ಆರೋಪದ ಮೇಲೆ ಯಾದವ್ ಅವರ ನೇತೃತ್ವದ ತಂಡ ವಿವಾಹದ ಸ್ಥಳಕ್ಕೆ ಆಗಮಿಸಿತ್ತು. ಆ ಸಂದರ್ಭ ಜನರನ್ನು ದೂಡಿ ಹಲ್ಲೆಗೈಯ್ಯಲಾಗಿತ್ತು ಎಂದು ವಧುವಿನ ತಾಯಿ ಸಬಿತಾ ದೇಬ್ ಆರೋಪಿಸಿದ್ದಾರೆ.

"ಸ್ಥಳೀಯ ಪೊಲೀಸರು  ಸಹಾನುಭೂತಿಯಿಂದ ವರ್ತಿಸಿದ್ದರೂ  ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ವರ್ತನೆಯಿಂದ ನಾವು ಮಾನಸಿಕವಾಗಿ ಜರ್ಝರಿತವಾಗಿದ್ದೇವೆ, ಈ ಘಟನೆಯನ್ನು  ನಾವೆಂದೂ ಮರೆಯುವುದಿಲ್ಲ, ನಮ್ಮ ಜೀವನದ ಖುಷಿಯ ದಿನ ಇಂತಹ ವಿಚಿತ್ರ ತಿರುವು ಪಡೆಯಬಹುದೆಂದು ಎಣಿಸಿರಲಿಲ್ಲ" ಎಂದು ಅವರು ಹೇಳಿದ್ದಾರೆ.

ವಿವಾಹ ಸಮಾರಂಭವೇಕೆ 10 ಗಂಟೆಯ ನಂತರವೂ ಮುಂದುವರಿದಿತ್ತು ಎಂದು ಕೇಳಿದಾಗ "ಮದುವೆಗಳು ಹೇಗೆ ನಡೆಯುತ್ತವೆ ಎಂದು ನಿಮಗೆ ತಿಳಿದಿದೆಯಲ್ಲವೇ, ರಾತ್ರಿ 11.30ಕ್ಕೆ ಮುಹೂರ್ತವಿದ್ದುದರಿಂದ ನಾವೆಲ್ಲರೂ ಅಲ್ಲಿದ್ದೆವು" ಎಂದಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಎಲ್ಲರನ್ನೂ ಸುಮಾರು ಎರಡು ಗಂಟೆ ವಶಕ್ಕೆ ಪಡೆದುಕೊಂಡಿದ್ದರು. ಸ್ಥಳೀಯ ಪೊಲೀಸರ ಹಸ್ತಕ್ಷೇಪದ ನಂತರ ಎಲ್ಲರನ್ನೂ ಬಿಡುಗಡೆಗೊಳಿಸಿದ  ನಂತರ ವಿವಾಹ ಪ್ರಕ್ರಿಯೆ ನಡೆದವು ಎಂದು ಆಕೆ ಹೇಳಿದ್ದಾರೆ. ಘಟನೆಯಿಂದ ವಧು-ವರ ಕೂಡ ಆಘಾತಗೊಂಡಿದ್ದಾರೆ ಎಂದೂ ಆಕೆ ಹೇಳಿಕೊಂಡಿದ್ದಾರೆ.

ಈ ಪ್ರಕರಣದ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಯಾದವ್ ಮಂಗಳವಾರ ಕ್ಷಮೆಯಾಚಿಸಿದ್ದಾರೆ. "ಕಳೆದ ರಾತ್ರಿಯ ಕ್ರಮದಿಂದ ಯಾರಿಗಾದರೂ ನೋವುಂಟಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ" ಎಂದು ಅವರು ಹೇಳಿದರಲ್ಲದೆ, "ಜನರ ಒಳ್ಳೆಯದಕ್ಕಾಗಿಯೇ ಕ್ರಮ ಕೈಗೊಳ್ಳಲಾಗಿತ್ತು, ಯಾರನ್ನೂ ಅವಮಾನಿಸುವ ಉದ್ದೇಶವಿರಲಿಲ್ಲ" ಎಂದಿದ್ದಾರೆ.

 ಘಟನೆ ಕುರಿತು ತನಿಖೆಗೆ ಇಬ್ಬರು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ತ್ರಿಪುರಾ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಹೇಳಿದ್ದಾರಲ್ಲದೆ ಮ್ಯಾಜಿಸ್ಟ್ರೇಟ್ ಅವರನ್ನು ವಜಾಗೊಳಿಸಲಾಗಿದೆ ಎಂಬ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News