ಸಿಂಡ್ರೋಮಿಕ್ ವಿಧಾನ ಅನುಸರಿಸಿ, ರೋಗಿಗಳ ದಾಖಲಾತಿ: ಆರೋಗ್ಯ ಸಚಿವ ಡಾ.ಸುಧಾಕರ್

Update: 2021-04-30 05:13 GMT

ಬೆಂಗಳೂರು, ಎ. 29: ಕೋವಿಡ್ ರೋಗ ಲಕ್ಷಣವಿದ್ದರೂ ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬರುವವರ ಆರೋಗ್ಯ ರಕ್ಷಣೆಗೆ ಸಿಂಡ್ರೋಮಿಕ್ ವಿಧಾನ ಅನುಸರಿಸಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಆರ್‍ಟಿಪಿಸಿಆರ್ ಅಥವಾ ರ್‍ಯಾಪಿಡ್ ಆಂಟಿಜೆನ್ ಪರೀಕ್ಷೆ ಮಾಡಿಸಿದರೂ ನೆಗೆಟಿವ್ ವರದಿ ಬರುತ್ತಿದೆ. ವ್ಯಕ್ತಿಗೆ ಕೋವಿಡ್ ರೋಗ ಲಕ್ಷಣವಿದ್ದರೂ ವರದಿಯಲ್ಲಿ ನೆಗೆಟಿವ್ ಬರುವುದರಿಂದ, ರೋಗ ತೀವ್ರತೆ ಹೆಚ್ಚಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲು ಸಮಸ್ಯೆಯಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಸಿಂಡ್ರೋಮಿಕ್ ವಿಧಾನ ಅನುಸರಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಧಾನದಲ್ಲಿ ಸಂಬಂಧಪಟ್ಟ ವೈದ್ಯರು ಅಥವಾ ವೈದ್ಯಾಧಿಕಾರಿಗಳೇ ರೋಗಿಗಳ ಸ್ಥಿತಿಯನ್ನು ಪ್ರಮಾಣಿಕರಿಸುತ್ತಾರೆ. ನಂತರ ರೋಗಿಗೆ ಪ್ರತ್ಯೇಕ ಸಂಖ್ಯೆಯನ್ನು ನೀಡಿ ಗುರುತಿಸಿ, ನಿರ್ದಿಷ್ಟ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಾಗಿಸಲಾಗುತ್ತದೆ. ಇವರನ್ನು ಕೊರೋನ ರೋಗಿ ಎಂದೇ ಪರಿಗಣಿಸಲಾಗಿತ್ತದೆ. ರೋಗಿಗೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ನೀಡಬೇಕಿರುವುದರಿಂದ ಈ ವಿಧಾನವನ್ನು ಅನುರಿಸಲು ನಿರ್ಧರಿಸಲಾಗಿದೆ. ಈ ವಿಧಾನ ಅನುಸರಿಸುವ ಕುರಿತು ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News