ಖಾಸಗಿ ಆಸ್ಪತ್ರೆಗಳು ಅಗತ್ಯವಿಲ್ಲದಿದ್ದರೂ ಸೋಂಕಿತರಿಗೆ ರೆಮ್‍ಡೆಸಿವಿರ್ ನೀಡುತ್ತಿವೆ: ಹೈಕೋರ್ಟ್ ಗೆ ಸರಕಾರ ಮಾಹಿತಿ

Update: 2021-04-29 14:51 GMT

ಬೆಂಗಳೂರು, ಎ.29: ಕೊರೋನ ಎರಡನೆ ಅಲೇ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಮಾ.11ರ ನಂತರ ರಾಜ್ಯದ ಆಸ್ಪತ್ರೆಗಳಲ್ಲಿ 22,001 ಆಕ್ಸಿಜನ್ ಬೆಡ್, 1,248 ಎಚ್‍ಎಫ್‍ಎನ್‍ಸಿ ಬೆಡ್, 701 ಐಸಿಯು, 1,548 ವೆಂಟಿಲೇಟರ್ ಬೆಡ್ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲೂ ಬೆಡ್‍ಗಳನ್ನು ಹೆಚ್ಚಳ ಮಾಡಲಾಗಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಅಗತ್ಯವಿಲ್ಲದಿದ್ದರೂ ಸೋಂಕಿತರಿಗೆ ರೆಮ್‍ಡೆಸಿವಿರ್ ನೀಡುತ್ತಿವೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಮಾಹಿತಿ ಒದಗಿಸಿದೆ.     

ರೆಮ್‍ಡೆಸಿವಿರ್, ಆಕ್ಸಿಜನ್ ಹಾಗೂ ಬೆಡ್‍ಗಳನ್ನು ಹೆಚ್ಚಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.    

ಎಪ್ರಿಲ್ ತಿಂಗಳಿನಲ್ಲಿ 9,405 ಆಕ್ಸಿಜನ್ ಬೆಡ್, 646 ವೆಂಟಿಲೇಟರ್ ಹಾಗೂ ಎಚ್‍ಎಫ್‍ಎನ್‍ಸಿ ಬೆಡ್‍ಗಳನ್ನು ಹೆಚ್ಚಿಸಲಾಗಿದೆ. ಕಮಾಂಡೋ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್‍ಗಾಗಿ ಮನವಿ ಮಾಡಲಾಗಿದ್ದು, ಹಜ್ ಭವನ್, ಪಶುವೈದ್ಯ ಕಾಲೇಜಿನಲ್ಲಿ ತಲಾ 100 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ 1500 ಬೆಡ್ ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಪೀಠಕ್ಕೆ ಸರಕಾರಿ ಪರ ವಕೀಲರು ಮಾಹಿತಿ ನೀಡಿದರು. ಅಲ್ಲದೆ, ಖಾಸಗಿ ಆಸ್ಪತ್ರೆಗಳು ಅನಗತ್ಯವಾಗಿ ರೆಮ್‍ಡೆಸಿವಿರ್ ಗೆ ಬೇಡಿಕೆಯನ್ನು ಇಡುತ್ತಿವೆ ಎಂದು ಪೀಠಕ್ಕೆ ತಿಳಿಸಿದರು.

ಗಂಭೀರ ಸೋಂಕಿತರಿಗಷ್ಟೇ ಆಕ್ಸಿಜನ್ ಬೆಡ್, ರೆಮ್‍ಡೆಸಿವಿರ್ ಪೂರೈಕೆ ಮಾಡಲಾಗುತ್ತಿದೆ. ಜತೆಗೆ ರಾಜ್ಯದಲ್ಲಿ ರೆಮ್‍ಡೆಸಿವಿರ್ ಪೂರೈಕೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದು, ಕೇಂದ್ರದಿಂದ ರಾಜ್ಯಕ್ಕೆ ಒಂದು ಲಕ್ಷ ಇಪ್ಪತ್ತೆರಡು ಸಾವಿರ ರೆಮ್‍ಡೆಸಿವಿರ್ ಹಂಚಿಕೆ ಆಗಿದೆ. ಪ್ರತಿದಿನ 20 ಸಾವಿರಕ್ಕೂ ಹೆಚ್ಚು ರೆಮ್‍ಡೆಸಿವಿರ್ ಗೆ ಬೇಡಿಕೆಯಿದ್ದು, ವೆಬ್‍ಸೈಟ್‍ನಲ್ಲಿ ರೆಮ್‍ಡೆಸಿವಿರ್ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ವಾರ್ ರೂಮ್‍ನಲ್ಲಿ ರೆಮ್‍ಡೆಸಿವಿರ್ ಗಾಗಿ ಅಧಿಕಾರಿ ನೇಮಕ ಮಾಡಲಾಗಿದ್ದು, 38,420 ರೆಮ್‍ಡೆಸಿವಿರ್ ಈಗಾಗಲೇ ಸಂಗ್ರಹವಿದೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳಿಂದ ಅನಗತ್ಯವಾಗಿ ರೆಮ್‍ಡೆಸಿವಿರ್ ಗೆ ಬೇಡಿಕೆ ಬರುತ್ತಿದೆ. ಅಗತ್ಯವಿಲ್ಲದಿದ್ದರೂ ಸೋಂಕಿತರಿಗೆ ರೆಮ್‍ಡೆಸಿವಿರ್ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳೇ ಸೋಂಕಿತರಿಗೆ ರೆಮ್‍ಡೆಸಿವಿರ್ ಪೂರೈಸಲಿ ಎಂದು ಸರಕಾರಿ ಪರ ವಕೀಲ ವಿಕ್ರಮ್ ಹುಯಿಲಗೋಳ್ ಹೇಳಿಕೆ ನೀಡಿದ್ದಾರೆ.

ಮೇ 4ರೊಳಗೆ 802 ಮೆ. ಟನ್ ಆಕ್ಷಿಜನ್ ಪೂರೈಸಿ

‘ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ರೆಮ್‍ಡೆಸಿವಿರ್, ಆ್ಯಕ್ಸಿಜನ್ ಪೂರೈಸುವಂತೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಎರಡು ದಿನದಲ್ಲಿ ಮನವಿ ಸಲ್ಲಿಸಬೇಕು. ಈ ಮನವಿಯನ್ನು ಪರಿಗಣಿಸಿ ಕೇಂದ್ರ ಸರಕಾರ ಮೇ 4ರೊಳಗೆ ರಾಜ್ಯಕ್ಕೆ ಹಂಚಿಕೆ ಮಾಡಿರುವ 802 ಮೆ. ಟನ್ ಆಕ್ಸಿಜನ್ ಹಾಗೂ ಅಗತ್ಯ ಪ್ರಮಾಣದಲ್ಲಿ ರೆಮ್‍ಡೆಸಿವಿರ್ ಪೂರೈಸಬೇಕು.’

-ಎ.ಎಸ್.ಓಕ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News