300 ಮಂದಿ ಕೈದಿಗಳಿಗೆ ಕೋವಿಡ್ ಪಾಸಿಟಿವ್, ಐಸೋಲೆಷನ್‍ನಲ್ಲಿ ಚಿಕಿತ್ಸೆ: ಗೃಹ ಸಚಿವ ಬೊಮ್ಮಾಯಿ

Update: 2021-04-29 14:55 GMT

ಬೆಂಗಳೂರು, ಎ. 29: ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 300 ಮಂದಿ ಕೈದಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಅವರೆಲ್ಲರನ್ನು ಐಸೋಲೇಷನ್‍ನಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ಸಿಎಂ ಗೃಹ ಕಚೇರಿಯಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳೊಂದಿಗಿನ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಮುನ್ನಚ್ಚರಿಕೆ ಕ್ರಮವಾಗಿ ಎಲ್ಲ ಕಾರಾಗೃಹಗಳನ್ನು ಸ್ಯಾನಿಟೈಸ್ ಮಾಡಲು ಸೂಚನೆ ನೀಡಲಾಗಿದೆ. ಕೋವಿಡ್ ಸೋಂಕು ಹರಡದಂತೆ ಎಲ್ಲ ರೀತಿಯ ಮುನ್ನಚ್ಚರಿಕೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರಕಾರ ಹೇರಿರುವ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಕೋವಿಡ್ ನಿರ್ವಹಣೆಗೆ ಐದು ಮಂದಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು(ಎಡಿಜಿಪಿ)ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪತ್ತೆಗೆ ಸಿವಿಲ್ ಡಿಫೆನ್ಸ್ ಸಿಬ್ಬಂದಿ: ನಾಪತ್ತೆಯಾಗಿರುವ ಕೋವಿಡ್ ಸೋಂಕಿತರು, ಅವರ ಸಂಪರ್ಕಿತರ ಪತ್ತೆಗೆ ಮತ್ತು ಹೋಮ್ ಐಸೋಲೇಷನ್ ಕಾರ್ಯದ ಮೇಲುಸ್ತುವಾರಿಗೆ ರಾಜ್ಯದಲ್ಲಿರುವ 1,500 ಸಿವಿಲ್ ಡಿಫೆನ್ಸ್ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುವುದು. ಜೊತೆಗೆ 8,500 ಮಂದಿ ಹೋಮ್ ಗಾರ್ಡ್ ಗಳನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಸಿಬ್ಬಂದಿ ಒದಗಿಸಲಾಗುವುದು ಎಂದರು.

ರಾಜ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿಯನ್ನು ಶುಚಿತ್ವ ಕಾರ್ಯಕ್ಕಾಗಿ ಬಳಕೆ ಮಾಡಿಕೊಳ್ಳಲು ಆದೇಶ ನೀಡಲಾಗಿದೆ ಎಂದ ಅವರು, ಕೋವಿಡ್ ಕರ್ಫ್ಯೂ ಅವಧಿಯಲ್ಲಿ ಕೈಗಾರಿಕೆಗಳು ಹಾಗೂ ಅಗತ್ಯ ಸೇವೆಗಳಿಗೆ ತೆರಳುವವರಿಗೆ ಮಾತ್ರ ಮನೆಯಿಂದ ಹೊರ ಹೋಗಲು ಅವಕಾಶ ನೀಡಲಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಗೆ ಸುತ್ತಾಡಲು ಅವಕಾಶವಿಲ್ಲದಂತೆ ಕಟ್ಟುನಿಟ್ಟಿನ ಪರಿಶೀಲನೆಗೆ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬಾಂಗ್ಲಾದ ರೆಮ್‍ಡೆಸಿವಿರ್ ಪತ್ತೆ

ಮೇಡ್ ಇನ್ ಬಾಂಗ್ಲಾದೇಶ ಎಂದು ಹೆಸರಿರುವ ರೆಮ್‍ಡೆಸಿವಿರ್ ಔಷಧ ಮಾರಾಟ ಪ್ರಕರಣವನ್ನು ಸಂಬಂಧ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದೆ. ಈ ಔಷಧ ಬೆಂಗಳೂರಿಗೆ ಹೇಗೆ ಬಂತು? ಯಾವ ಆಸ್ಪತ್ರೆಯಿಂದ ಬಂತು? ಇದನ್ನು ಇಲ್ಲಿಗೆ ತಂದ ವ್ಯಕ್ತಿ ಯಾರು? ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ'

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News