ಕೋವಿಡ್19: ವಕ್ಫ್ ಸಂಸ್ಥೆಗಳು ಅರ್ಹ ಫಲಾನುಭವಿಗಳಿಗೆ ನೆರವು ನೀಡಬೇಕು- ವಕ್ಫ್ ಬೋರ್ಡ್

Update: 2021-04-29 15:20 GMT

ಬೆಂಗಳೂರು, ಎ.29: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ತೀರಾ ಹೆಚ್ಚಳ ಉಂಟಾಗಿದ್ದು, ಈ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯವು ಕಠಿಣ ಲಾಕ್‍ಡೌನ್ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರಿಂದಾಗಿ ರಾಜ್ಯದ ಜನಸಾಮಾನ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ ಎಂದು ರಾಜ್ಯ ಔಖಾಫ್(ವಕ್ಫ್) ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ಯೂಸುಫ್ ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳ ಆಡಳಿತ ಸಮಿತಿಗಳು, ಮುತವಲ್ಲಿ, ಆಡಳಿತಾಧಿಕಾರಿಗಳಿಗೆ ಜಿಲ್ಲಾ ವಕ್ಫ್ ಅಧಿಕಾರಿಗಳ ಮೂಲಕ ನಿರ್ದೇಶನ ನೀಡುವ ಸುತ್ತೋಲೆಯನ್ನು ಹೊರಡಿಸಿರುವ ಅವರು, ಇಂತಹ ಸಂದರ್ಭದಲ್ಲಿ ವೈಯಕ್ತಿಕ  ಹಾಗೂ ಸಾಮೂಹಿಕವಾಗಿ ಪರಸ್ಪರ ಸಹಕಾರ ಹಾಗೂ ದೈನಂದಿನ ಅವಶ್ಯಕತೆಗಳನ್ನು ಪೂರೈಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ವಿಶೇಷವಾಗಿ ವಕ್ಫ್ ಸಂಸ್ಥೆಗಳು ತಮ್ಮ ವ್ಯಾಪ್ತಿಯೊಳಗೆ ವಾಸಿಸುತ್ತಿರುವ ನಿರ್ಗತಿಕ ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಹಾಯ ಮಾಡುವುದು ಆಯಾ ವಕ್ಫ್ ಸಂಸ್ಥೆಗಳ ಧ್ಯೇಯೋದ್ದೇಶ ಮತ್ತು ಕರ್ತವ್ಯವಾಗಿದೆ ಎಂದು ಮುಹಮ್ಮದ್ ಯೂಸುಫ್ ತಿಳಿಸಿದ್ದಾರೆ.

ಈಗಾಗಲೆ ರಾಜ್ಯದ ಸುಮಾರು ವಕ್ಫ್ ಸಂಸ್ಥೆಗಳು ತಮ್ಮ ವ್ಯಾಪ್ತಿಗಳಲ್ಲಿ ನಾಗರಿಕರ ಆರೋಗ್ಯ ಹಾಗೂ ಅವರ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ. ಇದೇ ರೀತಿಯಲ್ಲಿ ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳು ತಮ್ಮ ಆದಾಯದ ನಿರ್ದಿಷ್ಟ ಭಾಗವನ್ನು ಕೋವಿಡ್ ಸಾಂಕ್ರಾಮಿಕದಿಂದಾಗಿ ತುತ್ತಾಗಿರುವ ರೋಗಿಗಳಿಗೆ ವೈದ್ಯಕೀಯ ಸೌಲಭ್ಯ, ಸಲಕರಣೆಗಳು ಹಾಗೂ ಆಕ್ಸಿಜನ್ ಮುಂತಾದವುಗಳ ಸೌಲಭ್ಯವನ್ನು ಪೂರೈಸುವಲ್ಲಿ ಶ್ರಮಿಸುವುದು ಪ್ರಸ್ತುತ ಸ್ಥಿತಿಯಲ್ಲಿ ಅತೀ ಅವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ.

ಆದುದರಿಂದ, ರಾಜ್ಯಾದ್ಯಂತ ಎಲ್ಲ ಅರ್ಹ ವಕ್ಫ್ ಸಂಸ್ಥೆಗಳು ತಮ್ಮ ಅವಶ್ಯಕತೆಗಳಿಂದ ಬಾಕಿ ಉಳಿದಿರುವ ಆರ್ಥಿಕ ಶಕ್ತಿಯಲ್ಲಿ ಗರಿಷ್ಠ ಭಾಗವನ್ನು ಸ್ಥಳೀಯ ಕಡು ಬಡವರು, ನಿರ್ಗತಿಕರಿಗೆ ಕೋವಿಡ್ ಸಾಂಕ್ರಾಮಿಕ ತುರ್ತು ಪರಿಸ್ಥಿತಿ ಹಾಗೂ ಪವಿತ್ರ ರಮಝಾನ್ ಮಾಸವನ್ನು ಗಮನದಲ್ಲಿಟ್ಟುಕೊಂಡು ಆಹಾರ ಧಾನ್ಯ ವಿತರಣೆ ಮತ್ತು ಅವಶ್ಯಕ ಆರೋಗ್ಯ ಸೇವೆಗಳಿಗಾಗಿ ಪಾರದರ್ಶಕ ರೀತಿಯಲ್ಲಿ ಖರ್ಚು ಮಾಡಿ ಇಂತಹ ಖರ್ಚುಗಳ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ಇಡುವಂತೆ ಅವರು ಕೋರಿದ್ದಾರೆ.

ಅಲ್ಲದೆ, ಕೋವಿಡ್ ಮಹಾಮಾರಿಯಲ್ಲಿ ರಾಜ್ಯಾದ್ಯಂತ ಎಲ್ಲ ಅರ್ಹ ವಕ್ಫ್ ಸಂಸ್ಥೆಗಳು ಸಮಾಜದ ಕಡು ಬಡವರ ಕನಿಷ್ಠ ಅವಶ್ಯಕತೆಗಳು ಹಾಗೂ ಆರೋಗ್ಯ ಸೇವೆಗಳು ಮತ್ತು ಇನ್ನಿತರ ಅಗತ್ಯತೆಗಳನ್ನು ಪೂರೈಸುವುದು ತಮ್ಮ ಸಂಸ್ಥೆಯ ನೈತಿಕ ಜವಾಬ್ದಾರಿಯೆಂದು ಅರಿತುಕೊಂಡು ವಕ್ಫ್ ಸಿದ್ಧಾಂತಗಳ ಮಾನವೀಯತೆ ಪ್ರದರ್ಶಿಸಬೇಕು ಎಂದು ಮುಹಮ್ಮದ್ ಯೂಸುಫ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News