ನಿವೃತ್ತಿಯ 14 ವರ್ಷಗಳ ಬಳಿಕ ಪಿಂಚಣಿ ಸೌಲಭ್ಯ ಪಡೆಯುವಲ್ಲಿ ಯಶಸ್ವಿಯಾದ ಮಹಿಳೆ

Update: 2021-04-29 17:38 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.29: ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ತಾತ್ಕಾಲಿಕ ಆಧಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ 14 ವರ್ಷಗಳ ಬಳಿಕ ಪಿಂಚಣಿ ಪಡೆಯುವಲ್ಲಿ 72 ವರ್ಷದ ಮಹಿಳೆಯೊಬ್ಬರು ಯಶಸ್ವಿಯಾಗಿದ್ದಾರೆ.

25 ವರ್ಷಗಳ ಕಾಲ ಸರಕಾರಕ್ಕೆ ಸೇವೆ ಸಲ್ಲಿಸಿದ್ದರೂ ತಮ್ಮನ್ನು ಖಾಯಂಗೊಳಿಸಿಲ್ಲ ಹಾಗೂ ನಿವೃತ್ತಿ ಸೌಲಭ್ಯಗಳನ್ನು ನೀಡಿಲ್ಲ ಎಂದು ರಾಯಚೂರು ಜಿಲ್ಲೆಯ ಲಿಂಗಸಗೂರಿನ ಜಿ.ಪಿ. ಸರೋಜಮ್ಮ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಈ ತೀರ್ಪು ನೀಡಿದೆ. ಅರ್ಜಿದಾರರ ಸೇವೆಯನ್ನು ಖಾಯಂಗೊಳಿಸಬೇಕು. 1992ರಿಂದ ಪೂರ್ವಾನ್ವಯವಾಗುವಂತೆ ಪಿಂಚಣಿ ಸೇರಿದಂತೆ ಎಲ್ಲ ನಿವೃತ್ತಿ ಸೌಲಭ್ಯಗಳನ್ನು ನೀಡಬೇಕು ಎಂದು ಆದೇಶಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ಮಹಿಳೆಯಿಂದ ಸರಕಾರ ಸೇವೆ ಪಡೆದಿದೆ. ಸುದೀರ್ಘ 25 ವರ್ಷಗಳ ಕಾಲ ಸೇವೆ ಪಡೆದುಕೊಂಡಿರುವ ಸರಕಾರ ಕೊನೆಯವರೆಗೂ ಅವರ ಸೇವೆಯನ್ನು ಖಾಯಂಗೊಳಿಸಿಲ್ಲ. ಅಂತಿಮವಾಗಿ ನಯಾ ಪೈಸೆ ನೀಡದೆ ಸೇವೆಯಿಂದ ನಿವೃತ್ತಿಗೊಳಿಸಿರುವುದು ಶೋಷಣೆಯಲ್ಲದೆ ಮತ್ತೇನೂ ಅಲ್ಲ. ಓರ್ವ ಮಾದರಿ ಉದ್ಯೋಗದಾತನ ನಡವಳಿಕೆಯೂ ಇದಲ್ಲ. ಹೀಗಾಗಿ 10 ವರ್ಷಗಳ ಕಾಲ ತಾತ್ಕಾಲಿಕ ಸೇವೆ ಸಲ್ಲಿಸಿದವರನ್ನು ಖಾಯಂಗೊಳಿಸುವ ನಿಯಮದಂತೆ ಅರ್ಜಿದಾರ ಮಹಿಳೆಯ ಸೇವೆಯನ್ನು ಖಾಯಂಗೊಳಿಸಬೇಕು. ಅಲ್ಲದೇ, ಸೇವಾವಧಿಯನ್ನು ಲೆಕ್ಕಾಚಾರ ಮಾಡಿ 1992ರ ಮಾರ್ಚ್ ನಿಂದ ಪೂರ್ನಾನ್ವಯವಾಗುವಂತೆ ಸಿಗಬೇಕಿರುವ ಎಲ್ಲ ನಿವೃತ್ತಿ ಸೌಲಭ್ಯಗಳನ್ನು ಮುಂದಿನ ನಾಲ್ಕು ತಿಂಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.

ಏನಿದು ಪ್ರಕರಣ: ರಾಯಚೂರಿನ ಜಿ.ಪಿ.ಸರೋಜಮ್ಮ 1982ರಲ್ಲಿ ಸಿಂಧನೂರಿನ ತಾಲೂಕು ಅಭಿವೃದ್ಧಿ ಮಂಡಳಿಗೆ ತಾತ್ಕಾಲಿಕ ಸೇವೆ ಅಡಿ ಕೆಲಸಕ್ಕೆ ಸೇರಿದ್ದರು. ನಂತರ ಇವರನ್ನು ತಾಲೂಕು ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿತ್ತು. ಆ ಬಳಿಕ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದ ಇವರನ್ನು 2007ರ ಜ.1ರಂದು 58ನೆ ವಯಸ್ಸಿನಲ್ಲಿ ನಿವೃತ್ತಿಗೊಳಿಸಲಾಗಿತ್ತು. ಇವರ ಸೇವಾವಧಿ ಸಂದರ್ಭದಲ್ಲಿ ಕೆಲವು ಸಹೋದ್ಯೋಗಿಗಳನ್ನು ಖಾಯಂಗೊಳಿಸಲಾಗಿತ್ತಾದರೂ ಸರೋಜಮ್ಮ ಅವರನ್ನು ಕಡೆಗಣಿಸಲಾಗಿತ್ತು. ಸರಕಾರದ ಈ ಕ್ರಮ ಪ್ರಶ್ನಿಸಿ 2011ರಲ್ಲಿ ಸರೋಜಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News