ಬಂಗಾಳ ಚುನಾವಣೆಯಲ್ಲಿ ಟಿಎಂಸಿಗೆ ಭಾರೀ ಮುನ್ನಡೆ: ಮಮತಾ ಬ್ಯಾನರ್ಜಿಗೆ ರಾಜನಾಥ್ ಸಿಂಗ್ ಅಭಿನಂದನೆ

Update: 2021-05-02 12:08 GMT

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷ ಭಾರೀ ಗೆಲುವು ಸಾಧಿಸುವತ್ತ ಹೆಜ್ಜೆ ಇಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ  ರಾಜನಾಥ್ ಸಿಂಗ್ ಸಹಿತ ಹಲವು ರಾಜಕೀಯ ಮುಖಂಡರು ಮಮತಾ ಬ್ಯಾನರ್ಜಿ ಅವರನ್ನು ಅಭಿನಂದಿಸಿದ್ದಾರೆ.

ನಂದಿಗ್ರಾಮ ಕ್ಷೇತ್ರದಲ್ಲಿ ಭಾರೀ  ಹೋರಾಟದ ನಂತರ 17 ಸುತ್ತಿನ ಮತ ಎಣಿಕೆಯ ಕೊನೆಯವರೆಗೂ ಸ್ಪರ್ಧೆಯೊಡ್ಡಿದ್ದ ಮಮತಾ ಬ್ಯಾನರ್ಜಿ 1,200 ಮತಗಳಿಂದ ಪ್ರತಿಸ್ಪರ್ಧಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ದ ಜಯ ಗಳಿಸಿದರು.

"ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ ಅಭಿನಂದನೆಗಳು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ವಿಜಯದ ಬಗ್ಗೆ ದೀದಿ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಅಧಿಕಾರಾವಧಿಗೆ ನನ್ನ ಶುಭಾಶಯಗಳು'' ಎಂದು ರಾಜನಾಥ್ ಟ್ವೀಟಿಸಿದ್ದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಟ್ವೀಟ್‌ನಲ್ಲಿ ಪ್ರಜ್ಞಾವಂತ ಪಶ್ಚಿಮಬಂಗಾಳ ರಾಜ್ಯದ ಜನರಿಗೆ ಅಭಿನಂದಿಸಿದ್ದಾರೆ. ಬಿಜೆಪಿಯ ದ್ವೇಷದ ರಾಜಕೀಯ ವನ್ನು ಸೋಲಿಸುವಲ್ಲಿ ಕಾರ್ಯಕರ್ತರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

"ಬಂಗಾಳದಲ್ಲಿ ಬಿಜೆಪಿಯ ದ್ವೇಷದ ರಾಜಕೀಯವನ್ನು ಸೋಲಿಸಿದ ಪ್ರಜ್ಞಾವಂತ ಸಾರ್ವಜನಿಕರಿಗೆ, ಹೋರಾಟಗಾರರಾದ ಮಮತಾ ಬ್ಯಾನರ್ಜಿ ಜೀ ಹಾಗೂ ಟಿಎಂಸಿಯ ಸಮರ್ಪಿತ ನಾಯಕರು ಹಾಗೂ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು'' ಎಂದು ಯಾದವ್ ಟ್ವೀಟಿಸಿದ್ದಾರೆ.

"ಇದು ಬಿಜೆಪಿಯು ಮಹಿಳೆಯೊಬ್ಬರಿಗೆ ಮಾಡಿದ ‘ದೀದಿ ಒ ದೀದಿ' ಎಂಬ ಅವಹೇಳನಕಾರಿ ವ್ಯಂಗ್ಯಕ್ಕೆ ಸಾರ್ವಜನಿಕರು ನೀಡಿದ ಸೂಕ್ತ ಉತ್ತರವಾಗಿದೆ "ಎಂದು ಅವರು ಹೇಳಿದರು.

ಟಿಎಂಸಿ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರಿಯೆನ್ ಇಂದು ಭಾರತ ಮತ್ತು ಪಶ್ಚಿಮ ಬಂಗಾಳಕ್ಕೆ "ಮಹತ್ವದ" ದಿನ ಎಂದು ಬಣ್ಣಿಸಿದರು.

"ವಿಶ್ವದ ಅತ್ಯಂತ ವಿನಾಶಕಾರಿ ಶಕ್ತಿ, ಮೋ-ಶಾ ಅವರ ಬಿಜೆಪಿ ವಿರುದ್ಧ ಹೋರಾಡಿದ ನಂತರ ಒಂದು ಭಾವನಾತ್ಮಕ ದಿನವಿದು. ಏಜೆನ್ಸಿಗಳು ಮತ್ತು ನಾಚಿಕೆಯಿಲ್ಲದ ಚುನಾವಣಾ ಆಯೋಗದ  ಸಹಾಯದಿಂದ ಹೊಲಸು ಅಭಿಯಾನ ನಡೆಸಲಾಗಿತ್ತು. ನಾವು ಉತ್ಸಾಹಭರಿತರಾಗಿದ್ದೇವೆ ಎಂಬುದು ಅರ್ಥವಾಗುವಂತಹದ್ದಾಗಿದೆ. ಆದರೆ ಕೋವಿಡ್  ಸಮಯದಲ್ಲಿ ನಾವು ಜವಾಬ್ದಾರಿಯುತವಾಗಿ ವಿಜಯೋತ್ಸವ ಆಚರಿಸಬೇಕು "ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News