ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದುರಂತ: ಸಿಎಂ, ಆರೋಗ್ಯ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ನಾಯಕರ ಆಗ್ರಹ

Update: 2021-05-03 12:02 GMT
ಸಚಿವರ ಜೊತೆ ಸಿಎಂ ಯಡಿಯೂರಪ್ಪ ( File Photo)

ಬೆಂಗಳೂರು, ಮೇ 3: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 20ಕ್ಕೂ ಅಧಿಕ ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿರುವ ಘಟನೆ ಇದೀಗ ರಾಷ್ಟ್ರದ ಗಮನ ಸೆಳೆದಿದ್ದು, ಪ್ರಮುಖವಾಗಿ ಕಾಂಗ್ರೆಸ್, ಆರೋಗ್ಯ ಸಚಿವ ಹಾಗೂ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

''ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ 24 ಜನ ರೋಗಿಗಳು ಸಾವಿಗೀಡಾಗಿರುವ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಪ್ರಕರಣದ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಚಾಮರಾಜನಗರ ಜಿಲ್ಲೆಯಲ್ಲಿ ರೋಗಿಗಳ ಸಾವು ಪ್ರಕರಣದ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದು ಅತ್ಯಂತ ಗಂಭೀರ ಹಾಗೂ ಅಮಾನವೀಯ ಪ್ರಕರಣ. ರಾಜ್ಯದಲ್ಲಿ ಆಡಳಿತಯಂತ್ರ ಕುಸಿದು ಬಿದ್ದಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?' ಎಂದು ಪ್ರಶ್ನಿಸಿದ್ದಾರೆ.

`ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರದ ಲಾಲಸೆಗೆ ಇನ್ನಷ್ಟು ಅಮಾಯಕ ಜನರು ಬಲಿಯಾಗುವುದು ಬೇಡ. ಜನರ ಜೀವ ರಕ್ಷಿಸಲಾಗದ ಇಂಥಾ ಸರಕಾರ ಇರುವುದಕ್ಕಿಂತ ತೊಲಗುವುದೇ ಲೇಸು. ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಆಕ್ಸಿಜನ್ ಸಿಗದೆ ಉಂಟಾಗಿರುವ ಸರಣಿ ಸಾವುಗಳ ಮುಂದುವರಿದ ಭಾಗವಿದು. ಈ ಸಾವಿಗೆ ರಾಜ್ಯ ಬಿಜೆಪಿ ಸರಕಾರ, ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಜಿಲ್ಲಾಡಳಿತವೇ ನೇರ ಹೊಣೆ' ಎಂದು ಸಿದ್ದರಾಮಯ್ಯ ದೂರಿದ್ದಾರೆ.

'ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಜನ ಕೋವಿಡ್ ಸೋಂಕಿತರು ಸೇರಿದಂತೆ ಇನ್ನಿತರ ರೋಗಿಗಳು ಸಾವಿಗೀಡಾಗಿರುವ ಘಟನೆ ತಿಳಿದು ಸಂಕಟವಾಯಿತು. ಮೃತರ ಶೋಕತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಕಂಬನಿ ಮಿಡಿದಿದ್ದಾರೆ.

ರಾಜೀನಾಮೆ ನೀಡಬೇಕು: `ಚಾಮರಾಜನಗರ ಘಟನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರದ ವೈಫಲ್ಯದಿಂದ ಸಂಭವಿಸಿದ್ದು, ಇದೊಂದು ವ್ಯವಸ್ಥಿತ ಕೊಲೆ. ಕೂಡಲೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜೀನಾಮೆ ನೀಡಬೇಕು. ಈ ಸಾವುಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ನೈತಿಕ ಹೊಣೆಯನ್ನು ಹೊರಬೇಕು' ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಸಾವು ಅಥವಾ ಕೊಲೆಯೋ?: ಎಐಸಿಸಿ ನಾಯಕ ರಾಹುಲ್ ಗಾಂಧಿ, `ಇದು ಸಾವೋ ಅಥವಾ ಕೊಲೆಯೋ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸುತ್ತೇನೆ. ಈ ದುರಂತದಂತೆ ಇನ್ನೆಷ್ಟು ಜನ ಬಳಲಬೇಕು? ಅದಕ್ಕೂ ಮೊದಲು ನಿದ್ರಾವಸ್ಥೆಯಲ್ಲಿವ ವ್ಯವಸ್ಥೆ ಎದ್ದೇಳಬೇಕು' ಎಂದು ರಾಜ್ಯ ಸರಕಾರವನ್ನು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News