ಕೊಡಗಿನಲ್ಲಿ ಮಂಗಳವಾರ, ಶುಕ್ರವಾರ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ

Update: 2021-05-03 14:38 GMT
ಚಾರುಲತಾ ಸೋಮಲ್

ಮಡಿಕೇರಿ, ಮೇ 3: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತಿದೆ, ಉಳಿದ ದಿನ ಎಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ದಿನಸಿ, ಹಣ್ಣು, ತರಕಾರಿ, ಮಾಂಸ, ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಔಷಧಿ ಅಂಗಡಿ, ಪೆಟ್ರೋಲ್ ಬಂಕ್‍ಗಳಿಗೆ ಬಂದ್ ಅನ್ವಯಿಸುವುದಿಲ್ಲವೆಂದು ತಿಳಿಸಿರುವ ಜಿಲ್ಲಾಧಿಕಾರಿಗಳು, ಹಾಲು, ಹಾಲಿನ ಉತ್ಪನ್ನಗಳು ಮತ್ತು ಪತ್ರಿಕೆ ವಿತರಣೆಗೆ ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆವರೆಗೆ ವಿನಾಯಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು, ಮೈಸೂರು, ಕೇರಳ ಭಾಗದಿಂದ ಬಂದವರಿಂದ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿ ರಚಿಸಿರುವ ಕಾರ್ಯಪಡೆಗಳು ಹೊರಗಿನಿಂದ ಬಂದವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಆದ್ದರಿಂದ ಹೊರ ರಾಜ್ಯ, ಜಿಲ್ಲೆಯಿಂದ ಬಂದವರು ಮನೆಯಲ್ಲೇ ಇರುವ ಮೂಲಕ ಸೋಂಕು ವ್ಯಾಪಿಸುವುದನ್ನು ತಡೆಯಲು ಸಹಕರಿಸಬೇಕೆಂದು ಮನವಿ ಮಾಡಿದರು.

ಆಕ್ಸಿಜನ್ ಕೊರತೆ ಇಲ್ಲ
ಕೊಡಗು ಜಿಲ್ಲೆಯಲ್ಲಿ ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ, ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದರಿಂದ ಮತ್ತಷ್ಟು ಆಕ್ಸಿಜನ್ ನ್ನು ಮೈಸೂರಿನಿಂದ ತರಿಸಿಕೊಳ್ಳಲಾಗುತ್ತಿದೆ. ಸೋಮವಾರಪೇಟೆಯಲ್ಲೂ 50 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆಗೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News