ಚಿಕ್ಕಮಗಳೂರು: ಉಸಿರಾಟದ ತೊಂದರೆ ಇದ್ದ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಮೃತ್ಯು; ಆಕ್ಸಿಜನ್ ಸಿಗದೆ ಸಾವು ಆರೋಪ

Update: 2021-05-03 18:38 GMT

ಚಿಕ್ಕಮಗಳೂರು, ಮೇ 3: ಕೋವಿಡ್ ಸಂಕಷ್ಟದ ಕಾಲದಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಹಲವು ಕೋವಿಡ್ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ದಿನ 24 ಮಂದಿ ಮೃತಪಟ್ಟಿರುವ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಈ ಮಧ್ಯೆ ಸೋಮವಾರ ರಾತ್ರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲೂ ಆಕ್ಸಿಜನ್ ಕೊರತೆ ಇದೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಉಳುವಾಗಿಲು ಗ್ರಾಮದ ಬಸವರಾಜ್ (42) ಅವರಿಗೆ ಸೋಮವಾರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದಾರೆ. 'ಉಸಿರಾಟದ ತೊಂದರೆಯಿಂದ ನರಳುತ್ತಿದ್ದರೂ ಬಸವರಾಜ್‍ಗೆ ಜಿಲ್ಲಾಸ್ಪತ್ರೆಯ ವೈದ್ಯರು ಸಕಾಲದಲ್ಲಿ ಚಿಕಿತ್ಸೆಯಾಗಲೀ, ಆಕ್ಸಿಜನ್ ಆಗಲೀ ನೀಡದ ಪರಿಣಾಮ ಆಸ್ಪತ್ರೆಗೆ ದಾಖಲಾದ ಕೇವಲ ಅರ್ಧ ಗಂಟೆಯಲ್ಲಿ ಮೃತಪಟ್ಟಿದ್ದಾರೆ' ಎಂದು ಸಂಬಂಧಿಕರು ಆರೋಪಿಸಿದ್ದಾರೆ.

'ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ಹೇಳುತ್ತಿದ್ದಾರೆ. ಆದರೆ ಆಕ್ಸಿಜನ್ ಕೊರತೆ ಇಲ್ಲ ಎಂದಾದರೆ ಬಸವರಾಜ್ ಉಸಿರಾಟದ ತೊಂದರೆಯಿಂದ ನರಳುತ್ತಿದ್ದರೂ ಆಕ್ಸಿಜನ್ ಏಕೆ ನೀಡಲಿಲ್ಲ? ಆಸ್ಪತ್ರೆಗೆ ದಾಖಲಾಗಿ ಅರ್ಧ ಗಂಟೆಯಾದರೂ ವೈದ್ಯರು ಚಿಕಿತ್ಸೆಗೆ ಏಕೆ ಮುಂದಾಗಿಲ್ಲ?' ಎಂದು ಬಸವರಾಜ್ ಸ್ನೇಹಿತ ಮಾಣಿಮಕ್ಕಿ ಲೋಕೇಶ್ ಪ್ರಶ್ನಿಸಿದ್ದಾರೆ.

ಕೊರೋನ ನೆಪ ಮುಂದಿಟ್ಟುಕೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗುವ ಸಾಮಾನ್ಯ ರೋಗಿಗಳಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ವೈದ್ಯರು ಕೊರೋನದ ಹಿಂದೆ ಬಿದ್ದಿರುವುದರಿಂದ ಬೇರೆ ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಸಿಗದೇ ಸಾಯುವಂತಾಗಿದೆ. ಬಸವರಾಜ್ ಅವರಿಗೆ ಸಕಾಲದಲ್ಲಿ ಆಕ್ಸಿಜನ್ ನೀಡಿದ್ದರೆ ಬದುಕುತ್ತಿದ್ದರು. ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಬಸವರಾಜ್ ಮೃತಪಟ್ಟಿದ್ದಾರೆಂದು ಬಸವರಾಜ್ ಸ್ನೇಹಿತ, ವಕೀಲ ಹಾಗೂ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಅನಿಲ್‍ಕುಮಾರ್ ಆರೋಪಿಸಿದ್ದಾರೆ.

ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ಬಸವರಾಜ್ ಅವರ ಸ್ವಾಬ್ ಅನ್ನು ಸಂಗ್ರಹಿಸಿರುವ ಜಿಲ್ಲಾಸ್ಪತ್ರೆಯ ವೈದ್ಯರು ಸ್ವಾಬ್ ಅನ್ನು ಪರೀಕ್ಷೆಗೆ ಕಳುಹಿಸಿದ್ದು, ಕೋವಿಡ್‍ನಿಂದ ಬಸವರಾಜ್ ಮೃತಪಟ್ಟಿದ್ದಾರೋ ಅಥವಾ ಬೇರೆ ಕಾಯಿಲೆಯಿಂದ ಮೃತಪಟ್ಟಿದ್ದಾರೋ ಎಂಬುದು ಕೋವಿಡ್ ವರದಿ ಬಂದ ಬಳಿಕ ತಿಳಿದುಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News