ಶಾಸಕಿ ಅಲ್ಲದಿದ್ದರೂ ಮಮತಾ ಬ್ಯಾನರ್ಜಿ ಸಿಎಂ ಆಗೋದು ಹೀಗೆ

Update: 2021-05-04 05:54 GMT

ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಮಾಜಿ ಸಮೀಪವರ್ತಿ,  ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋತರೂ ಬುಧವಾರ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಂದಿಗ್ರಾಮ ಚುನಾವಣಾ ಫಲಿತಾಂಶ ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವುದಾಗಿ ಮಮತಾ ಈಗಾಗಲೇ ಹೇಳಿದ್ದಾರೆ.

ಆದರೆ ತಮ್ಮ ಕ್ಷೇತ್ರದಲ್ಲಿ ಸೋತರೂ ಸಂವಿಧಾನಾತ್ಮಕವಾಗಿ ಅವರಿಗೆ ಮತ್ತೊಂದು ಅವಧಿಗೆ ಸಿಎಂ ಆಗಬಹುದಾಗಿದೆ.

ಸಂವಿಧಾನದ 164(4) ವಿಧಿಯ ಪ್ರಕಾರ ಚುನಾಯಿತರಲ್ಲದವರು ಮುಖ್ಯಮಂತ್ರಿಯಾಗಬಹುದಾದರೂ ಆತ ಅಥವಾ ಆಕೆ ಅಧಿಕಾರ ವಹಿಸಿಕೊಂಡ ಆರು ತಿಂಗಳುಗಳೊಗಾಗಿ ಚುನಾವಣೆಯನ್ನು ಸ್ಪರ್ಧಿಸಿ ಆರಿಸಿ ಬರಬೇಕಿದೆ.

ಸಂವಿಧಾನದ ಈ ನಿರ್ದಿಷ್ಟ ವಿಧಿಯ ಪ್ರಕಾರ ಶಾಸಕರಲ್ಲದವರೂ ಸಚಿವ ಸಂಪುಟದ ಭಾಗವಾಗಬಹುದಾಗಿದೆ ಹಾಗೂ ಸಿಎಂ ಹುದ್ದೆಯನ್ನೂ ಅಲಂಕರಿಸಬಹುದಾಗಿದೆ. ಆದರೆ ಆರು ತಿಂಗಳುಗಳೊಗಾಗಿ ಚುನಾವಣೆ ಸ್ಪರ್ಧಿಸಿ ಗೆಲ್ಲಬೇಕು ಅಥವಾ ವಿಧಾನಪರಿಷತ್ತಿಗೆ ಆಯ್ಕೆಯಾಗಬೇಕಿದೆ. ಇದಲ್ಲದೇ ಹೋದರೆ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಿದೆ.

ಅಂತೆಯೇ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಆರು ತಿಂಗಳುಗಳೊಗಾಗಿ ಮಮತಾ ಅವರು ತಮ್ಮ ರಾಜ್ಯದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಬೇಕಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನಪರಿಷತ್ ಇಲ್ಲದೇ ಇರುವುದರಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಅವರ ಮುಂದಿರುವ ಏಕೈಕ ಆಯ್ಕೆಯಾಗಿದೆ. ಆದರೆ ಮಮತಾ ಅವರು ಚುನಾವಣೆಯಲ್ಲಿ ಸೋತರೆ ಸಿಎಂ ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತದೆ.

ಅಂದ ಹಾಗೆ ಈ ರೀತಿ ಮಮತಾ ಅವರು ಅಧಿಕಾರ ವಹಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. 2011ರಲ್ಲಿ ಅವರು ಮೊದಲ ಬಾರಿ ಪಶ್ಚಿಮ ಬಂಗಾಳ ಸಿಎಂ ಆದ ಸಂದರ್ಭ ಚುನಾವಣೆ ಸ್ಪರ್ಧಿಸಿರಲಿಲ್ಲ, ಆದರೆ ಕೆಲ ತಿಂಗಳುಗಳ ನಂತರ ಅವರು ಭೊವನಿಪೋರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಇದೇ ರೀತಿ ಅಧಿಕಾರಕ್ಕೇರಿದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News