''ರಾಜ್ಯದ ಆಮ್ಲಜನಕ ಬಳಕೆಗೆ ಕೇಂದ್ರ ಸರಕಾರ ಮಿತಿ ಹೇರಿದ್ದನ್ನು ಪ್ರಶ್ನಿಸುವ ಎದೆಗಾರಿಕೆ ನಿಮಲ್ಲಿಲ್ಲವೇ?''

Update: 2021-05-04 10:43 GMT

ಬೆಂಗಳೂರು, ಮೇ 4: ಬಿಬಿಎಂಪಿ ಡೆತ್ ಆಡಿಟ್‌ನಲ್ಲಿ 100ಕ್ಕೂ ಹೆಚ್ಚು ಜನ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಮರಣ ಹೊಂದಿದ್ದಾರೆ ಎಂದು ಒಪ್ಪಿಕೊಂಡಿದೆ. ಬೆಂಗಳೂರಿನಲ್ಲಿಯೇ ಇಷ್ಟು, ರಾಜ್ಯಾದ್ಯಂತ ಇನ್ನೆಷ್ಟು? ಇದಕ್ಕೆ ಹೊಣೆಯಾದ ಆರೋಗ್ಯ ಸಚಿವ ಸುಧಾಕರ್ ಅವರ ತಲೆದಂಡ ಯಾವಾಗ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಇತ್ತೀಚಿಗೆ ರಾಜ್ಯದ ಬಿಜೆಪಿ ನಾಯಕರು ಕೇಂದ್ರ ಸರ್ಕಾರ ಆಮ್ಲಜನಕ ಕೊಡುತ್ತಿದೆ ಎಂದು ಡಂಗುರ ಸಾರಿದ್ದರು. ಅಸಲಿಗೆ ಅದು ಸುಳ್ಳು, ಕೇಂದ್ರ ಸರ್ಕಾರ ಆಮ್ಲಜನಕ ನೀಡುವುದಿರಲಿ ರಾಜ್ಯದ ಉತ್ಪಾದನೆಯನ್ನು ರಾಜ್ಯದಲ್ಲೇ ಬಳಸಲು ಮಿತಿ ಹೇರಿದೆ, ಇಲ್ಲಿ ಉತ್ಪಾದಿಸುವ ಆಮ್ಲಜನಕವನ್ನು ಪರರಾಜ್ಯಗಳಿಗೆ ಸದ್ದಿಲ್ಲದೆ ಕಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಸಾವಿನಲ್ಲಿ ಸಂಭ್ರಮಿಸುವ ಬಿಜೆಪಿ ಕೊಲೆಗಡುಕರೆ...ಗೆಲ್ಲುವುದು, ಸೋಲುವುದು ಇವೆಲ್ಲವೂ ಸಹಜ ಪ್ರಕ್ರಿಯೆ. ಕೇರಳದಲ್ಲಿ ಸೊನ್ನೆ ಪಡೆದ ನಿಮ್ಮದೇನು ಪ್ರಲಾಪ?! ಆಕ್ಸಿಜನ್ ಇಲ್ಲದೆ ನಿತ್ಯ ಜನ ಸಾಯುತ್ತಿದ್ದಾರೆ. ಇದರ ಬಗ್ಗೆ ಮಾತನಾಡುವ ನೈತಿಕತೆ ತೋರಿ. ನಿಮ್ಮಿಂದ ಕಾಂಗ್ರೆಸ್ ಮುಕ್ತ ಮಾಡಲಾಗದು, ಆದರೆ ಮನುಷ್ಯರನ್ನೇ ಮುಕ್ತ ಮಾಡುತ್ತಿದ್ದೀರಿ ಎಂದು ಟ್ವೀಟ್ ಮಾಡಿದೆ.

ಯಡಿಯೂರಪ್ಪ ಅವರೇ, ಕರ್ನಾಟಕದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯದ ಬಳಕೆಗೆ ಕೇಂದ್ರ ಸರ್ಕಾರ ಮಿತಿ ಹೇರಿದ್ದೇಕೆ? ಈ ನಿರ್ಬಂಧವನ್ನು ಪ್ರಶ್ನಿಸುವ ಎದೆಗಾರಿಕೆ ನಿಮ್ಮಲ್ಲಿಲ್ಲವೇ? ರಾಜ್ಯದಲ್ಲಿ ಜನ ಸಾಯುತ್ತಿದ್ದರೂ ಈ ಸರ್ವಾಧಿಕಾರಿ ಧೋರಣೆಯನ್ನೇಕೆ ಖಂಡಿಸಲಿಲ್ಲ? ಈ ವಿಚಾರ ಮರೆಮಾಚಿ ರಾಜ್ಯಕ್ಕೆ ಅನ್ಯಾಯ ಎಸಗುತ್ತಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News