ಕೋವಿಡ್ ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್ ಕೊರತೆ ಉಂಟಾಗದಂತೆ ಕ್ರಮ ವಹಿಸಿ: ಡಿಸಿಎಂ ಕಾರಜೋಳ ಸೂಚನೆ

Update: 2021-05-04 11:25 GMT

ಬೆಂಗಳೂರು, ಮೇ 4: ಬೆಳಗಾವಿ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಲಭ್ಯವಿರುವ ಹಾಸಿಗೆಗಳ ಮಾಹಿತಿಯನ್ನು ಪ್ರತಿದಿನ ವೆಬ್‍ಸೈಟ್ ಮೂಲಕ ಜನರಿಗೆ ನೀಡಬೇಕು. ಆಕ್ಸಿಜನ್, ರೆಮ್‍ಡಿಸಿವಿರ್ ಮತ್ತಿತರ ಔಷಧೋಪಕರಣಗಳ ಕೊರತೆ ಉಂಟಾಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಂಗಳವಾರ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಅಗತ್ಯ ಚಿಕಿತ್ಸೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳ ಜತೆ ಝೂಮ್ ಸಭೆಯ ಮೂಲಕ ಅವರು ಚರ್ಚೆ ನಡೆಸಿದರು.

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಆರೋಗ್ಯದ ಸಮಸ್ಯೆಗಳಿಗೆ ಸ್ಪಂದಿಸಲು ಎಲ್ಲ ಅಧಿಕಾರಿಗಳು ಸಮನ್ವಯತೆಯೊಂದಿಗೆ 24 ಗಂಟೆಯೂ ಕೆಲಸ ಮಾಡಲು ಮುಂದಾಗಬೇಕು. ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಆಕ್ಸಿಜನ್ ಕೊರತೆಯ ಬಗ್ಗೆ ಸಾಕಷ್ಟು ವರದಿಗಳು ಬರುತ್ತಿವೆ. ಆದುದರಿಂದ, ಜಿಲ್ಲೆಯಲ್ಲಿ ಲಭ್ಯವಿರುವ ಆಕ್ಸಿಜನ್ ದಾಸ್ತಾನು, ದೈನಂದಿನ ಬಳಕೆ ಹಾಗೂ ತುರ್ತು ಸಂದರ್ಭದಲ್ಲಿ ಪೂರೈಕೆಯ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಗೋವಿಂದ ಕಾರಜೋಳ ನಿರ್ದೇಶನ ನೀಡಿದರು.

ಅದೇ ರೀತಿ ರೆಮ್‍ಡಿಸಿವಿರ್ ಲಭ್ಯತೆ ಬಗ್ಗೆ ನಿಗಾ ವಹಿಸುವುದರ ಜತೆಗೆ ಅದು ಕಾಳಸಂತೆಯಲ್ಲಿ ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರೆಮ್‍ಡೆಸಿವಿರ್ ಅನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಆಸ್ಪತ್ರೆಗಳಿಗೆ ನೋಟಿಸ್ ನೀಡಬೇಕು. ಆದರೆ ಸೇವಾಶುಲ್ಕ ಮಾತ್ರ ಪಡೆಯಲು ಅವಕಾಶವನ್ನು ಕಲ್ಪಿಸಬೇಕು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಲಭ್ಯವಿರುವ ವೆಂಟಿಲೇಟರ್ ಸೌಲಭ್ಯ ಸಮರ್ಪಕ ಬಳಕೆಗೆ ಅಗತ್ಯವಿರುವ ತಂತ್ರಜ್ಞರನ್ನು ನೇಮಿಸಿಕೊಳ್ಳಬೇಕು. ಅಕ್ಕಪಕ್ಕದ ಜಿಲ್ಲೆಗಳ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿಕೊಂಡು ಆಕ್ಸಿಜನ್ ಮತ್ತಿತರ ಸೌಲಭ್ಯಗಳನ್ನು ಸಂದರ್ಭಕ್ಕೆ ತಕ್ಕಂತೆ ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು ಎಂದು ಗೋವಿಂದ ಕಾರಜೋಳ ತಿಳಿಸಿದರು.

ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಿ: ಕೋವಿಡ್ ಸೋಂಕು ಹರಡುತ್ತಿರುವುದರಿಂದ ವಲಸೆ ಕಾರ್ಮಿಕರು ಜಿಲ್ಲೆಗೆ ಹಿಂದಿರುಗುತ್ತಿದ್ದಾರೆ. ಹೀಗೆ ಹುಟ್ಟೂರಿಗೆ ಬರುವ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕಡ್ಡಾಯವಾಗಿ ಉದ್ಯೋಗ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಮಳೆನೀರು ಕೊಯ್ಲು, ಸಿಡಿ, ಬದು ನಿರ್ಮಾಣ ಮೂಲಕ ಉದ್ಯೋಗ ಕಲ್ಪಿಸಬೇಕು. ಒಂದು ವೇಳೆ ಸರಕಾರಿ ಜಾಗದಲ್ಲಿ ಕೆಲಸ ಸೃಷ್ಟಿಸುವುದು ಸಾಧ್ಯವಿಲ್ಲದಿದ್ದರೆ ಅವರ ಜಮೀನಿನಲ್ಲಿ ಉದ್ಯೋಗ ಸೃಷ್ಟಿಸಲು ಸಲಹೆ ನೀಡಿದರು.

ಕಡ್ಡಾಯವಾಗಿ ಲಸಿಕೆ ನೀಡಲು ನಿರ್ದೇಶನ: ಮಾಧ್ಯಮ ಪ್ರತಿನಿಧಿಗಳು, ಮನೆ ಮನೆಗೆ ಸಿಲಿಂಡರ್ ಪೂರೈಸುವವರಿಗೆ, ಕ್ಷೌರಿಕರು, ಅಗಸ ವೃತ್ತಿಯಲ್ಲಿ ತೊಡಗಿರುವವರಿಗೆ ಕೋವಿಡ್ ಲಸಿಕೆಯನ್ನು ಆದ್ಯತೆಯ ಮೇರೆಗೆ ನೀಡಬೇಕು ಎಂದು ಗೋವಿಂದ ಕಾರಜೋಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಹಾಸಿಗೆ, ಆಕ್ಸಿಜನ್, ರೆಮ್‍ಡೆಸಿವಿರ್ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಅನುದಾನ ಲಭ್ಯವಿದೆ. ಒಂದು ವೇಳೆ ಹಣಕಾಸು, ಔಷಧೋಪಕರಣಗಳ ಖರೀದಿ ಸೇರಿದಂತೆ ಸರಕಾರದಿಂದ ಯಾವುದೇ ರೀತಿಯ ನೆರವು ಅಗತ್ಯವಿದ್ದರೆ ತಕ್ಷಣವೇ ತಮ್ಮ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್, ಆಕ್ಸಿಜನ್ ಕೊರತೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಚಿವರ ನಿರ್ದೇಶನದಂತೆ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳು ಹಾಗೂ ಚಿಕಿತ್ಸಾ ಸೌಲಭ್ಯಗಳ ಮಾಹಿತಿಯನ್ನು ವೆಬ್‍ಸೈಟ್ ಮೂಲಕ ಸಾರ್ವಜನಿಕರಿಗೆ ನೀಡಲು ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸುಮಾರು 4 ಸಾವಿರ ಹಾಸಿಗೆಗಳು ಲಭ್ಯವಾಗಿವೆ. ಇದರಲ್ಲಿ 1909 ಆಕ್ಸಿಜನ್ ವ್ಯವಸ್ಥೆ ಕಲ್ಪಿಸಬಹುದಾದ ಹಾಸಿಗೆಗಳು. 179 ಐಸಿಯು ಹಾಸಿಗೆಗಳು. 137 ಐಸಿಯು ಜತೆಗೆ ವೆಂಟಿಲೇಟರ್ ಸೌಲಭ್ಯ ಹೊಂದಿರುವ ಹಾಸಿಗೆಗಳಿವೆ. ಇದಲ್ಲದೇ 77 ಹೈಫ್ಲೋ ಆಕ್ಸಿಜನ್ ಹಾಗೂ 543 ಹೈಫ್ಲೋ ನೇಸಲ್ ಆಕ್ಸಿಜನ್ ಸೌಲಭ್ಯ ಹೊಂದಿರುವ ಹಾಸಿಗೆಗಳಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಇದರಲ್ಲಿ ಒಂದು ಸಾವಿರ ಬೆಡ್‍ಗಳಿಗೆ ನಿರಂತರವಾಗಿ 24 ಗಂಟೆಗಳ ಕಾಲ ಆಕ್ಸಿಜನ್ ಒದಗಿಸುವ ಸಾಮರ್ಥ್ಯವಿದೆ. ಲಸಿಕಾಕರಣದಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದ್ದು, ಶೇ.40 ರಷ್ಟು ಲಸಿಕಾಕರಣವಾಗಿದೆ. 32 ಸಾವಿರ ಲಸಿಕೆಗಳು ಜಿಲ್ಲೆಗೆ ಸದ್ಯದಲ್ಲಿಯೇ ಪೂರೈಕೆಯಾಗಲಿವೆ. ಪ್ರತಿ ತಾಲೂಕು ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದ್ದು, ಅಗತ್ಯಬಿದ್ದರೆ ಹೋಬಳಿ ಮಟ್ಟದಲ್ಲಿ ಇಂತಹ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ್, ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆಯನ್ನು ಆಧರಿಸಿ 47 ಆಸ್ಪತ್ರೆಗಳಿಗೆ ರೆಮ್‍ಡಿಸಿವಿರ್ ಒದಗಿಸಲಾಗುತ್ತಿದೆ. ಸದ್ಯಕ್ಕೆ ಆಕ್ಸಿಜನ್ ಹಾಗೂ ರೆಮ್‍ಡಿಸಿವಿರ್ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದರ್ಶನ್ ಎಚ್.ವಿ. ಸೇರಿದಂತೆ ಆರೋಗ್ಯ, ಕಂದಾಯ ಹಾಗೂ ತುರ್ತುಸೇವೆಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News