ಬೆಡ್ ಬುಕ್ಕಿಂಗ್ ದಂಧೆಯಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳನ್ನು ಜೈಲಿಗಟ್ಟುತ್ತೇನೆ: ಸಂಸದ ತೇಜಸ್ವಿ ಸೂರ್ಯ

Update: 2021-05-04 14:07 GMT

ಬೆಂಗಳೂರು, ಮೇ 4: ಕಳೆದ 15-20 ದಿನಗಳಿಂದ ಬೆಂಗಳೂರು ಸೇರಿ ರಾಜ್ಯದಲ್ಲಿ ಬೆಡ್ ಸಿಗದೆ ಜನರು ಪರದಾಡುತ್ತಿದ್ದಾರೆ. ರಸ್ತೆ ರಸ್ತೆಗಳಲ್ಲಿ ಜನ ಸಾಯುತ್ತಿದ್ದಾರೆ. ನಮ್ಮ ಅಧಿಕಾರಿಗಳಿಗೆ ಮಧ್ಯರಾತ್ರಿಯೂ ಕರೆಗಳು ಬರುತ್ತಿವೆ. ಆದರೆ ಆಸ್ಪತ್ರೆಗಳಲ್ಲಿ ವಿಚಾರಿಸಿದರೆ ಯಾವ ಆಸ್ಪತ್ರೆಯಲ್ಲೂ ಬೆಡ್ ಇಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲಿ ಯಾವ ಬೆಡ್ ಗಳೂ ಖಾಲಿ ಇರುವುದಿಲ್ಲ. ಎಲ್ಲ ಬೆಡ್ ಗಳು ಕೂಡಾ ಬ್ಲಾಕ್ ಆಗಿರುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಯಾಕೆ ಬೆಡ್ ಸಿಗಲ್ಲ ಎಂಬುದರ ಬಗ್ಗೆ ನಾಲ್ಕೈದು ದಿನಗಳಿಂದ ಅಧ್ಯಯನ ಮಾಡಿದ್ದೇವೆ. ಅಧ್ಯಯನಯಲ್ಲಿ ಕರ್ಮಕಾಂಡ ಬಯಲಾಗಿದೆ. ಅಕ್ರಮವಾಗಿ ಬೆಡ್ ಬುಕ್ಕಿಂಗ್ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ ಎಂದು ಆರೋಪಿಸಿದರು. 

ಕೊರೋನ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದೆ ಇರುವ ವ್ಯಕ್ತಿಯ ಹೆಸರಿಗೆ ಬೆಡ್ ನೋಂದಣಿ ಮಾಡಿ, ಕೆಲವೇ ಕ್ಷಣಗಳಲ್ಲಿ ಅದೇ ಬೆಡ್ ಅನ್ನು ಹಣಕ್ಕಾಗಿ ಬೇರೆಯವರ ಹೆಸರಿಗೆ ನೋಂದಣಿ ಮಾಡಲಾಗುತ್ತಿದೆ. ಹೀಗಾಗಿ ಅವಶ್ಯಕತೆ ಇರುವವರಿಗೆ ಬೆಡ್ ಸಿಗದೆ, ಹಣ ನೀಡಿದವರಿಗೆ ಅಕ್ರಮವಾಗಿ ಬೆಡ್ ಸಿಗುತ್ತಿದೆ. ಬಿಬಿಎಂಪಿ ಬೆಡ್ ಬುಕ್ಕಿಂಗ್ ವೆಬ್ ಸೈಟ್ ಗಳಲ್ಲಿ ಬೆಡ್ ಗಳು ಭರ್ತಿಯಾಗಿರುವುದು ತೋರಿಸುತ್ತಿದೆ. ಆದರೆ ಬೆಡ್ ಅಗತ್ಯವಿಲ್ಲದೇ ಇರುವ ಮನೆಯಲ್ಲಿಯೇ ಐಸೊಲೇಷನ್ ಆಗಿರುವವರ, ಮೃತರ, ಚಿಕಿತ್ಸೆ ಪಡೆದು ಬಿಡುಗಡೆ ಆಗಿರುವವರ ಹೆಸರಿನಲ್ಲಿ ಹಣ ಪಡೆದು ತಮಗೆ ಬೇಕಾಗಿರುವವರಿಗೆ ಅಕ್ರಮವಾಗಿ ಬೆಡ್ ಬುಕ್ ಮಾಡಲಾಗುತ್ತಿದೆ. ಇದನ್ನು ಬಿಬಿಎಂಪಿ ವಾರ್ ರೂಮ್ ನಲ್ಲಿರುವವರೇ ಮಾಡುತ್ತಾರೆ. ಆವರು ಯಾರೂ ಸರಕಾರದ ಅಧಿಕಾರಿಗಳಲ್ಲ. ಅವರು ಏಜೆನ್ಸಿಗಳು ಎಂದು ಕಿಡಿಕಾರಿದರು.

ಸಂಸದ, ಶಾಸಕ ಅಥವಾ ಐಎಎಸ್‌ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ ಎಂಬ ಕಾರಣಕ್ಕೆ ಹಾಸಿಗೆ ಒದಗಿಸುವ ಸ್ಥಿತಿ ಇರಬಾರದು. ಸಹಾಯವಾಣಿ ಮೂಲಕ ಸಂಪರ್ಕಿಸಿದವರಿಗೆ ಮಾತ್ರ ಹಾಸಿಗೆ ಸಿಗಬೇಕು ಎಂದು ಅವರು ಹೇಳಿದರು.

ಕೊರೋನ ಸೊಂಕಿತರ ಬಂಧುಗಳು ಹಾಸಿಗೆ ಒದಗಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ದಂಧೆಯಲ್ಲಿ ತೊಡಗಿರುವವರು ಈ ಮಾಹಿತಿಯಲ್ಲಿ ಮೊಬೈಲ್‌ ನಂಬರ್‌ ಪಡೆದು ಸೋಂಕಿತರ ಬಂಧುಗಳನ್ನು ಸಂಪರ್ಕಿಸಿ ಬಿಬಿಎಂಪಿಗಾಗಿ ಕಾಯ್ದಿರಿಸಿರುವ ಹಾಸಿಗೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಅರೋಪಿಸಿದರು.

ಒಬ್ಬ ರೋಗಿಯ ಹೆಸರಿನಲ್ಲಿ, ಪಾಸಿಟಿವ್ ಬಂದ 20 ದಿನಗಳ ನಂತರ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಮಾಡಲಾಗಿದೆ. ಇನ್ನು ಕೆಲವರ ಹೆಸರಿನಲ್ಲಿ ಮೂರು– ನಾಲ್ಕು ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಲಾಗಿದೆ. ಜನ ಅಲ್ಲಿ ಚಿಕಿತ್ಸೆಗೆ ಹಾಸಿಗೆ ಸಿಗದೇ ಸಾಯುತ್ತಿದ್ದಾರೆ. ತಂದೆ ಸತ್ತು ಮಕ್ಕಳು ಅನಾಥರಾಗುತ್ತಿದ್ದಾರೆ. ಈ ದಾರುಣ ಸಂದರ್ಭದಲ್ಲೂ ನಡೆಸುತ್ತಿವುದು ಭ್ರಷ್ಟಾಚಾರ ಅಲ್ಲ, ಇದು ಕೊಲೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಇಂದು ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಜೈಲಿಗಟ್ಟುತ್ತೇನೆ. ಮುಖ್ಯಮಂತ್ರಿ ಇದರ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸಮಿತಿ ರಚಿಸಬೇಕು. ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಒದ್ದು ಒಳಗೆ ಹಾಕಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News