ರೆಮ್‍ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ: ಯಾರನ್ನೂ ಸುಮ್ಮನೆ ಬಿಡಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ ಸಿಎಂ ಬಿಎಸ್‌ವೈ

Update: 2021-05-04 13:10 GMT

ಬೆಂಗಳೂರು, ಮೇ 4: ಕೊರೋನ ಸೋಂಕಿತ ರೋಗಿಗಳಿಗೆ ನೀಡುವ ರೆಮ್‍ಡೆಸಿವಿರ್ ಸೇರಿದಂತೆ ಇನ್ನಿತರ ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದಕ್ಕೆ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ತಮ್ಮ ಸರಕಾರಿ ನಿವಾಸ ಕಾವೇರಿಯಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ರೆಮ್‍ಡೆಸಿವಿರ್ ಚುಚ್ಚುಮದ್ದು ದುರುಪಯೋಗ ಆಗುತ್ತಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ವೇಳೆ ಅಧಿಕಾರಿಗಳು ವಿಜಯಪುರದಲ್ಲಿ 1 ಎಫ್‍ಐಆರ್, ಮತ್ತೊಂದು ಆಸ್ಪತ್ರೆ ವಿರುದ್ಧ ಎಫ್‍ಐಆರ್, ಆಕ್ಸಿಜನ್ ಮಾರಾಟದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ನೀಡಿದರು. ಇದರಿಂದ ಕೆರಳಿದ ಮುಖ್ಯಮಂತ್ರಿ, ತನಿಖೆ ನಡೆಸಿದರೆ ಎಲ್ಲ ವಿವರಗಳು ಹೊರಗೆ ಬರುತ್ತದೆ. ಅದರಿಂದ ಆಗಬಹುದಾದ ಪರಿಣಾಮವನ್ನು ಎದುರಿಸಲು ಸಿದ್ಧವಾಗಿರಿ. ಈ ವಿಚಾರದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸರಕಾರದಿಂದಲೇ ರೆಮ್‍ಡೆಸಿವಿರ್ ಸರಬರಾಜು ಆಗಬೇಕು. ಆದರೂ ಇದು ಕಾಳಸಂತೆಯಲ್ಲಿ ಮಾರಾಟವಾಗುತ್ತದೆ ಎಂದರೆ ಎಲ್ಲರೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದೇ ಅರ್ಥ. ತನಿಖೆ ಮಾಡಿದರೆ ಎಲ್ಲವೂ ಹೊರಗಡೆ ಬರುತ್ತೆ. ಅದರ ಪರಿಣಾಮವನ್ನು ಎದುರಿಸಬೇಕು. ವಾಸ್ತವ ಸಂಗತಿಯನ್ನು ಮುಚ್ಚಿಟ್ಟು ನನ್ನ ಬಳಿ ಮಾತನಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಳಸಂತೆಯಲ್ಲಿ ರೆಮ್‍ಡೆಸಿವಿರ್ ಮಾರಾಟವಾಗುತ್ತಿರುವುದು ಸತ್ಯ. ಹೊರ ರಾಜ್ಯಗಳಿಗೂ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ನಮಗೆ ಬಂದಿವೆ. ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ಕೋವಿಡ್‍ನ ಸಂಕಷ್ಟದ ಕಾಲದಲ್ಲಿ ನಾವಿದ್ದೇವೆ. ಆದರೆ, ಕಾಳಸಂತೆಯಲ್ಲಿ ಔಷಧಿಗಳ ಮಾರಾಟ ನಡೆಯುತ್ತಿದೆ ಎಂದರೆ ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕೆಂಡಾಮಂಡಲವಾದರು.

ಮುಖ್ಯಮಂತ್ರಿಯ ಆಕ್ರೋಶಗೊಂಡಿದ್ದನ್ನು ಕಂಡು ಗಲಿಬಿಲಿಗೊಂಡ ಅಧಿಕಾರಿಗಳು, ಸರ್ ನಾವು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದು ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಮತ್ತಷ್ಟು ಕೆರಳಿದ ಯಡಿಯೂರಪ್ಪ, ನೀವು ಕೆಲಸ ಮಾಡುತ್ತಿಲ್ಲ ಎಂದು ನಾನು ಹೇಳಿಲ್ಲ. ಬರೀ ಕೆಲಸ ಮಾಡೋದು ಮುಖ್ಯ ಅಲ್ಲ. ನಮ್ಮ ರಾಜ್ಯದಲ್ಲಿ ಔಷಧಿಗಳು ಕೊರತೆ ಇರುವಾಗ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವುದು ಹೇಗೆ ಅದಕ್ಕೆ ಉತ್ತರ ನೀಡಿ ಎಂದರು.

ಇದರ ಬಗ್ಗೆ ತನಿಖೆ ಮಾಡಿಸಿದರೆ ಏನು ಪರಿಣಾಮವಾಗಲಿದೆ ಗೊತ್ತಾ? ತನಿಖೆ ಮಾಡಿಸುತ್ತೇನೆ, ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಪರಿಣಾಮ ಎದುರಿಸೋಕೆ ಸಿದ್ಧವಾಗಿರಿ ಎಂದು ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದರು.

ತುರ್ತು ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News