ಜನರ ನಿರ್ಲಕ್ಷ್ಯದಿಂದ ಕೋವಿಡ್ 2ನೇ ಅಲೆ ತೀವ್ರವಾಗಿ ಹರಡುತ್ತಿದೆ: ಸಚಿವ ಎಸ್.ಅಂಗಾರ

Update: 2021-05-04 13:47 GMT

ಚಿಕ್ಕಮಗಳೂರು, ಮೇ 4: ಜನರ ನಿರ್ಲಕ್ಷ್ಯದಿಂದಾಗಿ ಕೋವಿಡ್ 2ನೇ ಅಲೆ ರಾಜ್ಯ, ದೇಶದಲ್ಲಿ ತೀವ್ರವಾಗಿ ಹರಡುವಂತಾಗಿದೆ. ಕೊರೋನ ಸೋಂಕಿನ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.

ಜಿಲ್ಲಾ ಪಂಚಾಯತ್ ನ ಅಬ್ದುಲ್ ನಝೀರ್ ಸಾಬ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೋವಿಡ್ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊದಲನೇ ಹಂತದ ಕೋವಿಡ್ ಸಂದರ್ಭದಲ್ಲಿ ಸರಕಾರದೊಂದಿಗೆ ಜನರು ಉತ್ತಮ ಸ್ಪಂದನೆಯಿಂದಾಗಿ ಕೋವಿಡ್ ನಿಯಂತ್ರಿಸಲು ಸಾಧ್ಯವಾಯಿತು. ಆದರೆ 2ನೇ ಹಂತದ ಸಂದರ್ಭದಲ್ಲಿ ಜನರ ನಿರ್ಲಕ್ಷ್ಯದಿಂದಾಗಿ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಹಾಗೂ ಸಾರ್ವಜನಿಕರು ಪೂರಕ ವ್ಯವಸ್ಥೆಗಳನ್ನು ಮಾಡಿಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಜಿಲ್ಲಾಡಳಿತಕ್ಕೆ ತಿಳಿಸಿದರು.

ಸರಕಾರದ ಮಾರ್ಗಸೂಚಿಗಳು ನಮ್ಮ ರಕ್ಷಣೆಯ ಹಿತದೃಷ್ಟಿಯಿಂದ ಅಳವಡಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಯಾರೂ ಕೂಡ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸಚಿವ ಅಂಗಾರ ಸೂಚನೆ ನೀಡಿದರು.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಲ್ಲೆಯಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಅನುಸರಿದೇ ಇರುವುದು ಹೆಚ್ಚುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಹೊರ ಜಿಲ್ಲೆ ಹಾಗೂ ಬೆಂಗಳೂರಿನಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿ ಅವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಬೇಕು. ಹೋಂ ಸ್ಟೇಗಳ ಮೇಲೆ ನಿಗಾ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. 

ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಸುಸಜ್ಜಿತವಾದ ಅಂಬುಲೆನ್ಸ್ ಗಳ ಕೊರತೆ ಇದ್ದು, ಟೆಂಡರ್ ಕರೆಯುವ ಪ್ರಕ್ರಿಯೆಯು ವಿಳಂಬವಾಗುವುದರಿಂದ ಇದಕ್ಕೆ ಪೂರಕವಾದ ಮಾರ್ಗೋಪಾಯಗಳನ್ನು ಕೈಗೊಂಡು ಅಂಬುಲೆನ್ಸ್ ಗಳ ಕೊರತೆಯನ್ನು ತ್ವರಿತವಾಗಿ ನೀಗಿಸಬೇಕು. ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕಾದರೆ ಸರಕಾರದ ನಿಯಮಗಳ ಚೌಕಟ್ಟಿನಲ್ಲಿಯೇ ಕಾರ್ಯ ನಿರ್ವಹಿಸಬೇಕಾಗಿಲ್ಲ. ಬದಲಾಗಿ ಸ್ವತಃ ಅಧಿಕಾರಿಗಳೇ ನಿಯಮಗಳನ್ನು ಜಾರಿಗೊಳಿಸಿ ಕೋವಿಡ್ ನಿಯಂತ್ರಿಸಬಹುದು ಎಂದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಟಿ.ರವಿ ಮಾತನಾಡಿ, ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸುವಲ್ಲಿ ಪೂರಕ ಸಿದ್ಧತೆಗಳ ಆವಶ್ಯಕತೆ ಇರುವುದರಿಂದ ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಹಾಗೂ ಲಸಿಕೆಗಳಂತಹ ವೈದ್ಯಕೀಯ ಸೌಲಭ್ಯಗಳ ಕೊರತೆ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ರಾಜ್ಯಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. 24x*7 ಹೆಲ್ಪ್ ಲೈನ್, ಹೆಲ್ಪ್ ಡೆಸ್ಕ್ ಗಳನ್ನು ಕೋವಿಡ್ ನಿಯಂತ್ರಣಕ್ಕಾಗಿ ಸ್ಥಾಪಿಸಿದ್ದು, ನಿವೃತ್ತಿ ಹೊಂದಿರುವ ವೈದ್ಯರು ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿರುವವರಿಗೆ ಸಹಾಯವಾಣಿ ಮೂಲಕ ಸಲಹೆಗಳನ್ನು ನೀಡುವುದರ ಜೊತೆಗೆ ಧೈರ್ಯ ತುಂಬಬೇಕು. ಇದರಿಂದ ಆಸ್ಪತ್ರೆಗಳ ಮೇಲೆ ಬೀಳುವ ಹೊರೆ ಕಡಿಮೆಯಾಗಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ವೆಚ್ಚದ ದರಪಟ್ಟಿಯನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಆಳವಡಿಸುವಂತೆ ನಿರ್ದೇಶನ ನೀಡಬೇಕು. ಕೋವಿಡ್ ಸೋಂಕಿತರ ಜೊತೆಗೆ ಇನ್ನಿತರ ಖಾಯಿಲೆಗಳಿಗೆ ಸಂಬಂಧಪಟ್ಟ ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೊರದೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಮೊಬೈಲ್ ಪೋನ್‍ಗಳನ್ನು 24x7 ಕಾರ್ಯಾಚರಣೆಯಲ್ಲಿಟ್ಟುಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಇದುವರೆಗೂ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಎಚ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ಕಂದಾಯ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಹತ್ತು ತಿಂಗಳು ಅಥವಾ ಒಂದು ವರ್ಷಗಳ ಕಾಲ ಅಂತಿಮ ಪದವಿ ಪಡೆದ ನರ್ಸಿಂಗ್ ವಿದ್ಯಾರ್ಥಿಗಳನ್ನು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ನೇಮಿಸಿಕೊಳ್ಳಲಾಗುವುದು. ಅವರಿಗೆ ಕೋವಿಡ್-19 ಕರ್ತವ್ಯ ನಿರ್ವಹಿಸಿದ್ದಕ್ಕೆ ಪ್ರಮಾಣ ಪತ್ರವನ್ನು ಹಾಗೂ ಶಿಷ್ಯ ವೇತನದ ಜೊತೆಗೆ ಮುಂದಿನ ದಿನಗಳಲ್ಲಿ ಅವರನ್ನು ವೈದ್ಯ ವೃತ್ತಿಗೆ ಪರಿಗಣಿಸುವ ಸಂದರ್ಭದಲ್ಲಿ ಗ್ರೇಸ್ ಅಂಕಗಳನ್ನು ನೀಡಲಾಗುವುದು.
- ಸಿ.ಟಿ.ರವಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News