ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಮತ್ತೋರ್ವ ಸೋಂಕಿತ ಮೃತ್ಯು

Update: 2021-05-05 05:14 GMT
ಆಸ್ಪತ್ರೆಯೆದುರು ರೋದಿಸುತ್ತಿರುವ ಮೃತ ಸತ್ಯನಾರಾಯಣ ಶೆಟ್ಟಿಯವರ ಪತ್ನಿ

ಚಾಮರಾಜನಗರ, ಮೇ 5: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ಕೋವಿಡ್ ಸೋಂಕಿತ ಮತ್ತೋರ್ವ ರೋಗಿ ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ಸೋಂಕಿತ ವ್ಯಕ್ತಿಗೆ ನೀಡಲು ಆಕ್ಸಿಜನ್ ಇಲ್ಲ, ಬೆಡ್ ಖಾಲಿ ಇಲ್ಲ ಎಂದು ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಿದರು. ಇದರಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಸತ್ಯನಾರಾಯಣ ಶೆಟ್ಟಿ ಮೃತ ಸೋಂಕಿತ. ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಇವರನ್ನು ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಆಸ್ಪತ್ರೆಯ ವೈದ್ಯರು ಬೆಡ್ ಖಾಲಿಯಲ್ಲ, ಜೊತೆಗೆ ಆಕ್ಸಿಜನ್ ಕೂಡಾ ಇಲ್ಲ ಎಂದು ಆಸ್ಪತ್ರೆಗೆ ದಾಖಲಿಸಲಿಲ್ಲ. ಮತ್ತೆ ಇಂದು ಬೆಳಗ್ಗೆ ಅಡ್ಮಿಟ್ ಮಾಡಿದರೂ ಆಕ್ಸಿಜನ್ ವ್ಯವಸ್ಥೆಯಿಲ್ಲದ ಬೆಡ್ ನೀಡಿದರು. ಬಳಿಕ ಅರ್ಧಗಂಟೆಯಲ್ಲಿ ಸೋಂಕು ಉಲ್ಬಣಿಸಿ ಸತ್ಯನಾರಾಯಣ ಶೆಟ್ಟಿ ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

"ಸದ್ಯ ಬೆಡ್ ಖಾಲಿ ಇಲ್ಲ, ಆಕ್ಸಿಜನ್ ಕೂಡಾ ಇಲ್ಲ. ಯಾರಾದರೂ ಡಿಸ್ಚಾರ್ಜ್ ಆದರೆ ಮಾತ್ರ ಬೆಡ್ ನೀಡಲು ಸಾಧ್ಯ. ಎಮರ್ಜೆನ್ಸಿ ಇದ್ದರೆ ಬೇರೆಲ್ಲಾದರೂ ಕರೆದೊಯ್ಯಿರಿ ಅಂತ ಆಸ್ಪತ್ರೆಯ ವೈದ್ಯರು ಹೇಳಿದರು. ಆಸ್ಪತ್ರೆಯೆದುರು ಬೆಳಗ್ಗೆ ವರೆಗೆ ಕಾದು ಕುಳಿತರೂ ಬೆಡ್ ಸಿಕ್ಕಿಲ್ಲ. ಮತ್ತೆ ಇಂದು ಬೆಳಗ್ಗೆ 5:45ರ ಸುಮಾರಿಗೆ ಖಾಲಿ ಬೆಡ್ ಕೊಟ್ಟರು. ಆದರೆ ಆ ಬಳಿಕ ಅರ್ಧ ಗಂಟೆಯಲ್ಲಿ ನಮ್ಮಣ್ಣ ಕೊನೆಯುಸಿರೆಳೆದ" ಎಂದು ಸತ್ಯನಾರಾಯಣ ಶೆಟ್ಟಿಯವರ ಸಹೋದರ ದೂರಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News