ಬೆಡ್ ಸಿಗದೆ ಕೋವಿಡ್ ಸೋಂಕಿತ ಮೃತ್ಯು: ಚಾಮರಾಜನಗರ ಕೋವಿಡ್ ಆಸ್ಪತ್ರೆ ವಿರುದ್ಧ ಮೃತನ ಕುಟುಂಬಸ್ಥರ ಆಕ್ರೋಶ

Update: 2021-05-05 07:21 GMT

ಚಾಮರಾಜನಗರ, ಮೇ 5: ಉಸಿರಾಟದ ತೊಂದರೆಯಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಬಂದ ಕೋವಿಡ್ ಸೋಂಕಿತ ಯುವಕನೋರ್ವನಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಆತ ಮೃತಪಟ್ಟಿದ್ದಾಗಿ ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಯ ಬಳಿಕ ರೊಚ್ಚಿಗೆದ್ದ ಯುವಕನ ಕಡೆಯವರು ಜಿಲ್ಲಾಸ್ಪತ್ರೆಯ ಕಿಟಕಿ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರದ ಅಂಬೇಡ್ಕರ್ ಬಡಾವಣೆ ನಿವಾಸಿ ಅಭಿಷೇಕ್(25) ಮೃತ ಯುವಕ. ಅಭಿಷೇಕ್ ರಿಗೆ ಆರು ದಿನಗಳ ಹಿಂದೆ ಕೊರೋನ ಸೋಂಕು ದೃಢಪಟ್ಟಿದ್ದು, ಹೋಂ ಐಸೋಲೇಷನ್ ನಲ್ಲಿದ್ದರು. ನಿನ್ನೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಎಂದು ತಿಳಿಸಿದ್ದಾರೆ. ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಿ ಅಂತ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೆಲಹೊತ್ತಿನಲ್ಲಿ ಅಭಿಷೇಕ್ ಕೊನೆಯುಸಿರೆಳೆದಿರುವುದಾಗಿ ಮೃತನ ಕುಟುಂಬಸ್ಥರು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಿಸಿಕೊಂಡು ಆಕ್ಸಿಜನ್ ವ್ಯವಸ್ಥೆ ಮಾಡಿದ್ದರೆ ಅಭಿಷೇಕ್ ಬದುಕುತ್ತಿದ್ದ. ವೈದ್ಯರ ನಿರ್ಲಕ್ಷ್ಯದಿಂದಲೇ ಆತ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತನ ಕಡೆಯವರು ಆಸ್ಪತ್ರೆಯ ಕಿಟಕಿ ಗಾಜು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಎಎಸ್ಪಿ ಅನಿತಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News