ಚಾಮರಾಜನಗರ ಡಿಸಿಯ ಆರೋಪದಿಂದ ನೋವಾಗಿದೆ: ಮಾಧ್ಯಮದೆದುರು ಗದ್ಗದಿತರಾದ ಮೈಸೂರು ಜಿಲ್ಲಾಧಿಕಾರಿ

Update: 2021-05-05 08:50 GMT

ಮೈಸೂರು, ಮೇ 5: ಮೈಸೂರಿನ ಆಸ್ಪತ್ರೆಯಲ್ಲಿದ್ದ 40 ಆಕ್ಸಿಜನ್ ಸಿಲಿಂಡರ್ ಗಳನ್ನು ಅನ್ನು ರಿಸ್ಕ್ ತೆಗೆದುಕೊಂಡು ಚಾಮರಾಜನಗರಕ್ಕೆ ಕಳುಹಿಸಲಾಗಿದೆ. ಆದರೂ ಅಲ್ಲಿನ ಜಿಲ್ಲಾಧಿಕಾರಿ ತನ್ನ ಮೇಲೆ ವೃಥಾ ಆರೋಪ ಮಾಡಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗದ್ಗದಿತರಾಗಿ ನುಡಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಬುಧವಾರ ಚಾಮರಾಜ ಕ್ಷೇತ್ರದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಭಾಗವಹಿಸಿದ್ದ ಅವರು ಆನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

''ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 24 ಮಂದಿ ಮೃತಪಟ್ಟಿರುವುದಕ್ಕೆ ಅಲ್ಲಿನ ಜಿಲ್ಲಾಧಿಕಾರಿ ನನ್ನ ಮೇಲೆ ಅಪಪ್ರಚಾರ ಮಾಡಿ ಆಧಾರರಹಿತ ಹೇಳಿಕೆ ನೀಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ, ನಾನು ದಿನದ 24 ಗಂಟೆಯೂ ಜಾಗೃತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅಲ್ಲಿ ರೋಗಿಗಳಿಗೆ ಆಕ್ಸಿಜನ್ ಕೊರತೆ ಇದೆ ಎಂದು ಹೇಳಿದ ತಕ್ಷಣ ಆಸ್ಪತ್ರೆಯಲ್ಲಿದ್ದ 40 ಆಕ್ಸಿಜನ್ ಸಿಲಿಂಡರ್ ಗಳನ್ನು ರಿಸ್ಕ್ ತೆಗೆದುಕೊಂಡು ಕಳುಹಿಸಿದ್ದೇನೆ. ಆದರೂ ಅವರು ನನ್ನ ಬಗ್ಗೆ ಆರೋಪ ಮಾಡಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದು ಕಣ್ಣೀರಿಟ್ಟರು.

ದೇಶದ ಯಾವುದೇ ಮೂಲೆಯಲ್ಲಿ ಆದ ಸಾವು ಸಾವೇ. ಸತ್ತವರ ಮನೆಯಲ್ಲಿ ನೋವಿರುತ್ತದೆ. ಇಂತಹ ಸಂದರ್ಭದಲ್ಲಿ ಈ ರೀತಿ ಆರೋಪ ಮಾಡಬಾರದು. ನನ್ನ ಬಗ್ಗೆ ಅವರು(ಚಾಮರಾಜನಗರ ಜಿಲ್ಲಾಧಿಕಾರಿ) ಮಾಧ್ಯಮದಲ್ಲಿ ಹೇಳಿಕೆ ನೀಡದೇ ಇದ್ದಿದ್ದರೆ ನಾನೂ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಸಿಂಧೂರಿ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲೂ ನನ್ನ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳು ವರದಿಯಾಗುತ್ತಿದೆ. ನಾನು ಎಲ್ಲಿಯೂ ಇದಕ್ಕೆ ಉತ್ತರ ಕೊಡಲು ಹೋಗಿಲ್ಲ, ಸರ್ಕಾರ ಹಿರಿಯ ಐಎಎಸ್ ಅಧಿಕಾರಿಗಳನ್ನು ತನುಖಾಧಿಕಾರಿಯಾಗಿ ನೇಮಕ ಮಾಡಿದೆ.   ಸತ್ಯಾಸತ್ಯತೆಗಳೆಲ್ಲವೂ ತನಿಖೆಯಿಂದ ಹೊರಬರಲಿದೆ ಎಂದು ಹೇಳಿದರು.

ನಾವು ಮಾನವೀಯತೆ ದೃಷ್ಟಿಯಿಂದ ಚಾಮರಾಜನಗರಕ್ಕೆ ಆಕ್ಸಿಜನ್ ನೀಡಿದ್ದೇವೆ. ಆವರಿಗೆ ಅಗತ್ಯಕ್ಕೆ ಎಷ್ಟು ಬೇಕಿತ್ತೊ ಅದನ್ನು ಮುಂಚಿತವಾಗಿ ತರಿಸಿಟ್ಟುಕೊಳ್ಳಬೇಕಿತ್ತು. ಅವರದೇ ತಪ್ಪಿರುವಾಗ ನಮ್ಮ ಮೇಲೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News