ತೇಜಸ್ವಿ ಸೂರ್ಯಗೆ ಪ್ರಧಾನಿ ಮುಂದೆ ಮಾತನಾಡಲು ನಾಲಿಗೆ ಸತ್ತು ಹೋಗಿದೆಯೇ?: ಈಶ್ವರ್ ಖಂಡ್ರೆ ಆಕ್ರೋಶ

Update: 2021-05-05 09:41 GMT

ಬೆಂಗಳೂರು, ಮೇ 5: ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ವಾರ್ ರೂಂ ಅವ್ಯವಹಾರ ಬಯಲು ಮಾಡಿದ್ದಾರೆ. ಅಭಿನಂದನೆ. ಅಂದ ಹಾಗೆ ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆಗೆ 7 ಸಚಿವರು ಮತ್ತು ಒಬ್ಬ ರಾಜಕೀಯ ಕಾರ್ಯದರ್ಶಿ ಸೇರಿ ಅಷ್ಟದಿಗ್ಗಜರಿಗೆ ಹೊಣೆ ನೀಡಲಾಗಿತ್ತಲ್ಲ. ಈ ಅವ್ಯವಹಾರದಲ್ಲಿ ಅವರ ಪಾತ್ರ- ಪಾಲು ಎಷ್ಟು ಎಂಬುದನ್ನೂ ಬಹಿರಂಗಪಡಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ರೆಮಿಡೆಸಿವಿರ್ ಮತ್ತು ಆಕ್ಸಿಜನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ರೆಮಿಡೆಸಿವಿರ್ ನಕಲಿ ಔಷಧ ಜಾಲವೂ ಹುಟ್ಟಿಕೊಂಡಿದೆ. ಇದರ ಹಿಂದೆ ಆಳುವ ಪಕ್ಷದ ಯಾರ ಯಾರ ಕುಮ್ಮಕ್ಕು ಇದೆ ಎಂಬುದನ್ನೂ ತೇಜಸ್ವಿ ಸೂರ್ಯ ಬಹಿರಂಗ ಪಡಿಸುವರೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ 1041 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಆಗುತ್ತೆ. ಆದರೆ ಕೇಂದ್ರ ರಾಜ್ಯಕ್ಕೆ 815 ಮೆಟ್ರಿಕ್ ಟನ್ ಮಂಜೂರು ಮಾಡುತ್ತದೆ. ರಾಜ್ಯಕ್ಕೆ ಅಗತ್ಯ ಇರುವುದು 1700 ಮೆಟ್ರಿಕ್ ಟನ್ ಆಕ್ಸಿಜನ್. ಇದು ತೇಜಸ್ವಿ ಸೂರ್ಯ ಕಣ್ಣಿಗೆ ಕಾಣುತ್ತಿಲ್ಲವೇ. ಮಾಧ್ಯಮಗಳ ಮುಂದೆ ಜೋರಾಗಿ ಮಾತನಾಡುವ ಇವರಿಗೆ ಪ್ರಧಾನಿ ಮುಂದೆ ಮಾತನಾಡಲು ನಾಲಿಗೆ ಸತ್ತು ಹೋಗಿದೆಯೇ? ಎಂದು ಕಿಡಿಕಾರಿದ್ದಾರೆ.

ಜನ ಪ್ರಾಣವಾಯು ಸಿಗದೆ ನಿತ್ಯ ಸಾಯುತ್ತಿದ್ದಾರೆ. ಕೋರ್ಟ್ ಕೂಡ ಛಾಟಿ ಬೀಸಿದೆ. ಈ ಬಗ್ಗೆ ತೇಜಸ್ವಿ ಸೂರ್ಯ ಸೇರಿದಂತೆ 25 ಸಂಸದರ ಧ್ವನಿ ಏಕೆ ಅಡಗಿ ಹೋಗಿದೆಯೇ ಉತ್ತರ ನೀಡಿ. ಕೇಂದ್ರದ ಗುಲಾಮಗಿರಿ, ಕಪಟ ನಾಟಕ ಬಿಟ್ಟು ರಾಜ್ಯದ ಜನರ ಪ್ರಾಣ ಉಳಿಸಲು ಕೇಂದ್ರದ ಮೇಲೆ ಒತ್ತಡ ಹೇರಿ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News