ಬೆಡ್ ಬ್ಲಾಕಿಂಗ್ ಹಗರಣ: ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದೆ ಅತ್ತಿತ್ತ ಓಡಾಡಿದ ಸಚಿವ ಅಶೋಕ್

Update: 2021-05-05 10:11 GMT

ಬೆಂಗಳೂರು, ಮೇ 5: ಬೆಂಗಳೂರಿನಲ್ಲಿ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ಮಂಗಳವಾರ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದು, ಈ ಸಂಬಂಧ ಮಾಧ್ಯಮದವರು ಸಚಿವ ಅಶೋಕ್ ಅವರನ್ನು ಪ್ರಶ್ನಿಸಿದಾಗ ಅಶೋಕ್ ಅವರು ಉತ್ತರಿಸಲಾಗದೆ ಅತ್ತ ಇತ್ತ ಓಡಾಡುವ ವಿಡಿಯೋವೊಂದು ವೈರಲ್ ಆಗಿದೆ.

ಕೊರೋನ ಸೋಂಕಿತರಿಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬಿಬಿಎಂಪಿ ಬೆಂಗಳೂರು ದಕ್ಷಿಣ ಕೋವಿಡ್ ವಾರ್ ರೂಂ ಮೂಲಕ ಹಾಸಿಗೆ ವ್ಯವಸ್ಥೆ ಕಲ್ಪಿಸುವ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಜಯನಗರ ಠಾಣಾ ಪೊಲೀಸರು ರೋಹಿತ್ ಹಾಗೂ ನೇತ್ರಾ ಎಂಬವರನ್ನು ಬಂಧಿಸಿದ್ದಾರೆ.

ಘಟನೆ ಸಂಬಂಧ ವಿಧಾನಸೌಧದಲ್ಲಿ ಸಚಿವ ಅಶೋಕ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ, ಮೊದಲು ಉತ್ತರಿಸಲು ನಿರಾಕರಿಸುವ ಅಶೋಕ್ ಅತ್ತ ಇತ್ತ ಓಡಾಡುತ್ತಾರೆ. ಮೀಟಿಂಗ್ ಇದೆ, ಒಂದೇ ನಿಮಿಷ ಬಂದೆ ಎಂದು ಹೇಳುತ್ತಾರೆ. ಆದರೂ ಪಟ್ಟು ಬಿಡದ ಮಾಧ್ಯಮದವರು ಮತ್ತೆ ಮತ್ತೆ ಪ್ರಶ್ನಿಸುತ್ತಾರೆ. ಕೊನೆಗೆ ಸಚಿವ ಅಶೋಕ್ 'ಈಗ ಮೀಟಿಂಗ್ ನಲ್ಲಿ ಇದ್ದೇನೆ. ಸೂರ್ಯ ಅವರ ಜೊತೆ ಮಾತನಾಡಿ ತನಿಖೆ ಮಾಡಲಾಗುವುದು' ಎಂದು ಉತ್ತರಿಸುತ್ತಾರೆ.

ಇದರ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, 'ಕಳ್ಳನ ಮನಸು ಹುಳ್ಳಹುಳ್ಳಗೆ' ಎಂದು ವ್ಯಂಗ್ಯವಾಡಿದೆ. "ಇರೋ ಮೂವರಲ್ಲಿ ಕದ್ದವರು ಯಾರು" ಎನ್ನುವಂತೆ ಎಲ್ಲವೂ ಬಿಜೆಪಿ ಸರ್ಕಾರದ ಅಂಕೆಯಲ್ಲಿಯೇ ನಡೆಯುತ್ತಿರುವಾಗ, ಬಿಜೆಪಿ ಮಂತ್ರಿಗಳೇ ಎಲ್ಲವೂ ಸರಿ ಇದೆ ಎಂದು ಇಷ್ಟು ದಿನ ವಾದಿಸಿಕೊಂಡು ಬರುತ್ತಿರುವಾಗ 'ಕಳ್ಳನ ಮನಸು ಹುಳ್ಳಹುಳ್ಳಗೆ' ಎಂಬಂತೆ ಸಚಿವ ಅಶೋಕ್ ಉತ್ತರವಿಲ್ಲದೆ ಓಡುತ್ತಿರುವುದೇಕೆ?! ಈ ದಂಧೆಯಲ್ಲಿ ಸಾಮ್ರಾಟರಿಗೆ ಎಷ್ಟು ಪಾಲು? ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News