ತಡವಾಗಿ ಆಗಮಿಸಿದ ಆ್ಯಂಬುಲನ್ಸ್: ರಸ್ತೆಯಲ್ಲೇ ನರಳಾಡಿದ ಕೊರೋನ ಸೋಂಕಿತ ಯುವಕ ಆಸ್ಪತ್ರೆಯಲ್ಲಿ ಸಾವು

Update: 2021-05-05 13:36 GMT

ಮಡಿಕೇರಿ, ಮೇ.5: ಕೊರೋನ ಸೋಂಕಿತ ಯುವಕನೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲನ್ಸ್ ತಡವಾಗಿ ಆಗಮಿಸಿದ ಪರಿಣಾಮ ಪ್ರಜ್ಞೆ ತಪ್ಪಿದ ಯುವಕ ನಡು ರಸ್ತೆಯಲ್ಲೇ ನರಳಾಡಿದ ಹೃದಯ ವಿದ್ರಾವಕ ಘಟನೆ ಸೋಮವಾರಪೇಟೆ ತಾಲೂಕಿನ ಬಜಗುಂಡಿಯಲ್ಲಿ ಬುಧವಾರ ಅಪರಾಹ್ನ ಸಂಭವಿಸಿದ್ದು, 25 ವರ್ಷದ ಯುವಕ ಮಡಿಕೇರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲು ಬೆಳಗ್ಗೆಯಿಂದ ಆ್ಯಂಬುಲನ್ಸ್ ಗೆ ಕರೆ ಮಾಡಿದರೂ ಆ್ಯಂಬುಲನ್ಸ್ ಸಮಯಕ್ಕೆ ಸರಿಯಾಗಿ ಬರಲಿಲ್ಲ ಎನ್ನಲಾಗಿದೆ. ತಡವಾಗಿ ಬಂದ ಆ್ಯಂಬುಲನ್ಸ್ ರೋಗಿಯ ಬಳಿ ತೆರಳದೆ ಸುಮಾರು 100 ಮೀಟರ್ ದೂರದಲ್ಲಿ ನಿಲ್ಲಿಸಿ, ಆ್ಯಂಬುಲನ್ಸ್ ಗೆ ನಡೆದುಕೊಂಡು ಬರಲು ಹೇಳಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕ ನಡೆದುಕೊಂಡು ಬರುವ ಸಂದರ್ಭ ಪ್ರಜ್ಞೆ ತಪ್ಪಿ ಬಿದ್ದು ನಡು ರಸ್ತೆಯಲ್ಲೇ ನರಳಾಡಿದ್ದಾನೆ ಎನ್ನಲಾಗಿದೆ.

ಯುವಕನ ಮನೆಯ ಪಕ್ಕದಲ್ಲೇ ಘಟನೆ ಸಂಭವಿಸಿದ್ದು, ತಕ್ಷಣ ಮನೆಯಿಂದ ಓಡಿ ಬಂದ ಯುವಕನ ತಾಯಿ ಮಗನನ್ನು ಅಪ್ಪಿಕೊಂಡು ರೋಧಿಸಿದ ಮನಕಲಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುತ್ತಮುತ್ತಲಿನ ಕೆಲವರು ಆಗಮಿಸಿ ಆ್ಯಂಬುಲನ್ಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಪಿಪಿಇ ಕಿಟ್ ಸೇರಿದಂತೆ ಯಾವುದೇ ಸುರಕ್ಷತೆ ಇಲ್ಲದೆ ಆ್ಯಂಬುಲನ್ಸ್ ಚಾಲಕ ಕೂಡಾ ಅಸಹಾಯಕರಾಗಿದ್ದರು. 

ಆ್ಯಂಬುಲನ್ಸ್ ನಲ್ಲಿ ಐದು ಸೋಂಕಿತರು: ಯುವಕನನ್ನು ಆಸ್ಪತ್ರೆಗೆ ದಾಖಲಿಸಲು ಬಂದ ಆ್ಯಂಬುಲನ್ಸ್ ನಲ್ಲಿ ತಾಲೂಕಿನ ವಿವಿಧೆಡೆಯ ಐದು ಸೋಂಕಿತರು ಇದ್ದರು. ಈ ಸಂದರ್ಭ ಇದೇ ಮಾರ್ಗವಾಗಿ ಬಂದ ಪೊಲೀಸ್ ಶ್ರದ್ದಾಂಜಲಿ ವಾಹನದಲ್ಲಿ ಯುವಕನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮಡಿಕೇರಿ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಯುವಕ ಸಾವನ್ನಪ್ಪಿದ್ದಾನೆ. ಪರೀಕ್ಷೆಯಲ್ಲಿ ಮೃತ ಯುವಕನಿಗೆ ಕೊರೋನ ದೃಢಪಟ್ಟಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News