ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮು ಬಣ್ಣ: ತೇಜಸ್ವಿ ಸೂರ್ಯ ವಿರುದ್ಧ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ

Update: 2021-05-05 15:39 GMT

ಬಿಬಿಎಂಪಿಯ ಬೆಡ್ ಹಂಚಿಕೆ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದರು. ಬೆಡ್ ಬ್ಲಾಕಿಂಗ್ ಹಗರಣ ನಡೆಯುತ್ತಿದೆ, ಇದರ ಹಿಂದೆ ಬಿಬಿಎಂಪಿಯವರೇ ಇದ್ದಾರೆ ಎಂದು ಆರೋಪಿಸಿದ್ದರು. ಹೊರ ನೋಟಕ್ಕೆ ಸಂಸದರ ಕಾಳಜಿಯನ್ನು ಹೆಚ್ಚಿನವರು ಶ್ಲಾಘಿಸುವಂತಾಗಿದ್ದರೂ ಈ ಪತ್ರಿಕಾಗೊಷ್ಠಿಯ ಬೆನ್ನಿಗೇ ನಡೆದ ಬೆಳವಣಿಗೆಗಳು ಇದು ಅವರ ಮತೀಯ ಆಟದ ಇನ್ನೊಂದು ರೂಪವೆಂದು ಹಲವರು ಆರೋಪಿಸಿದ್ದರು. ಜೊತೆಗೆ ಸಂಸದರ ವಿರುದ್ಧ ಇದೀಗ ಟ್ವಿಟ್ಟರ್ ನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿವೆ.

ತೇಜಸ್ವಿ ಸೂರ್ಯ ಅವರು ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಹಾಗೂ ಸತೀಶ್ ರೆಡ್ಡಿ ಅವರ ಜತೆಗೂಡಿ ಬಿಬಿಎಂಪಿ ವಾರ್ ರೂಮ್ ಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂದರ್ಭ 17 ಮಂದಿ ಮುಸ್ಲಿಮರ ಹೆಸರುಗಳನ್ನು ಹೇಳುತ್ತಿರುವುದು ಹಾಗೂ ಯಾವ ಆಧಾರದಲ್ಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ನೀವೇನು ಇವರನ್ನು ಮದರಸಕ್ಕೆ ನೇಮಕ ಮಾಡಿದ್ದೀರಾ ಎಂದೂ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ''ಸಾವಿರಾರು ಬೆಂಗಳೂರಿಗರನ್ನು ಕೊಲ್ಲುತ್ತಿರುವ ಬಿಬಿಎಂಪಿ ವಾರ್ ರೂಂನಲ್ಲಿರುವ ಉಗ್ರರ ಪಟ್ಟಿ'' ಎಂಬ ಸಂದೇಶ ಹರಿದಾಡಿವೆ. 

ಆದರೆ ಭ್ರಷ್ಟಾಚಾರ ಅನಾವರಣಗೊಳಿಸುವ ನೆಪದಲ್ಲಿ ಸಂಸದರು ಕೋಮು ವಿಚಾರಗಳನ್ನು ತಂದು ಮತೀಯ ಆಟ ಆರಂಭಿಸಿದ್ದಾರೆ ಎಂದು ಹಲವು ಟ್ವಿಟ್ಟರಿಗರು ಕಿಡಿಕಾರಿದ್ದಾರೆ. #DiaperSuryaExposed ಹ್ಯಾಶ್ ಟ್ಯಾಗ್ ಮೂಲಕ ಸುಮಾರು 37 ಸಾವಿರಕ್ಕೂ ಅಧಿಕ ಟ್ವೀಟ್ ಮಾಡಲಾಗಿದೆ.

''ವಾರ್ ರೂಮ್ ನಲ್ಲಿರುವ ನೌಕರರ ಪಟ್ಟಿ 200+. ಅದರಲ್ಲಿ ಕೇವಲ 17 ಮುಸ್ಲಿಂ ಹೆಸರುಗಳನ್ನು ಅವರು ಆಯ್ಕೆ ಮಾಡಿದ್ದಾರೆ. ಕೊರೋನ ಸಾಂಕ್ರಾಮಿಕದ ಸಮಯದಲ್ಲೂ ಎಲ್ಲದಕ್ಕೂ ಕೋಮು ಬಣ್ಣವನ್ನು ಹಚ್ಚುವುದಕ್ಕಾಗಿ ಬಿಜೆಪಿ ಮತ್ತು ತೇಜಸ್ವಿ ಸೂರ್ಯರನ್ನು ನಂಬಿ'' ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ಬೆಂಗಳೂರಿನ ದಕ್ಷಿಣ ವಲಯದ ಕೋವಿಡ್ ವಾರ್ ರೂಮಿನಲ್ಲಿ 206 ಜನರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 17 ಮುಸ್ಲಿಮರು. ತೇಜಸ್ವಿ ಸೂರ್ಯ ಈ 17 ಮಂದಿಯನ್ನು ಮಾತ್ರ ಹೆಸರಿಸಿ ಹಾಸಿಗೆ ಹಗರಣದ ಬಗ್ಗೆ ಮಾತನಾಡಿದರು. ಬಿಬಿಎಂಪಿ/ ರಾಜ್ಯದಲ್ಲಿ ಅವರದೇ ಸರಕಾರ ಅಧಿಕಾರದಲ್ಲಿದ್ದರೂ ಇದರಲ್ಲಿ ಬಿಜೆಪಿಯ ಸಿಎಂ, ಸಂಸದ, ಶಾಸಕರ ತಪ್ಪಿಲ್ಲ. ಎಲ್ಲಾ ತಪ್ಪಿಗೂ ಈ 17 ಹುಡುಗರು ಜವಾಬ್ದಾರರು! ಇದು ಬಿಜೆಪಿಯ ಧರ್ಮಾಂಧತೆಯ ಮಟ್ಟ'' ಎಂದು ಯುವ ಕಾಂಗ್ರೆಸ್ ನಾಯಕ ಶ್ರೀವತ್ಸ ಟ್ವೀಟ್ ಮಾಡಿದ್ದಾರೆ.

''ಕೋವಿಡ್ ಸಂದರ್ಭ ಇರುವ ಸಿಬ್ಬಂದಿಯ ಕೊರತೆಯ ನಡುವೆಯೇ ಮುಸ್ಲಿಂ ಸಿಬ್ಬಂದಿಯ ನೇಮಕಾತಿಯಿಂದ ತೇಜಸ್ವಿ ಸೂರ್ಯಗೆ ಸಮಸ್ಯೆ, ಇದು ಅವರ ಆದ್ಯತೆ. ಸಾಂಕ್ರಾಮಿಕದ ಸಂದರ್ಭ ಕೋಮು ರಾಜಕಾರಣ ನಾಚಿಕೆಗೇಡು,'' ಎಂದು ಸಂಗೀತಾ ಎಂಬವರು ಕಿಡಿಕಾರಿದ್ದಾರೆ.

''ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರ ಟ್ವೀಟ್‍ನಲ್ಲಿ 2000+ ಬೆಡ್ ಲಭ್ಯ ಎಂದಿತ್ತು. ನಿಮ್ಮ ಎಕ್ಸ್‍ಪೋಸ್ ನಂತರ 1500+ ಬೆಡ್ ಎಂದು ನೀವು ಹೇಳುತ್ತಿದ್ದೀರಿ. ನಾವು ಯಾರನ್ನು ನಂಬಬೇಕು? ನಿಮ್ಮ ಸರಕಾರಕ್ಕೆ ಸರಳ, ಪಾರದರ್ಶಕ ವ್ಯವಸ್ಥೆ ಒದಗಿಸಲು ಸಾಧ್ಯವಿಲ್ಲವೇ?'' ಎಂದು ವಿನಯ್ ಶ್ರೀನಿವಾಸ್ ಎಂಬವರು ಬರೆದಿದ್ದಾರೆ.

ತೇಜಸ್ವಿ ಸೂರ್ಯ, ನೀವು ಇಲ್ಲಿ ಹೋರಾಡಲು ಸಾಧ್ಯವಿಲ್ಲ. ಇದು ವಾರ್ ರೂಮ್. ಇದು ಅತಿರೇಕದ ಸಂಗತಿ. ವಾರ್ ರೂಮ್ ನಲ್ಲಿ ಇಂತಹ ನಡವಳಿಕೆಯನ್ನು ನಾನು ಈ ಹಿಂದೆ ಕೇಳಿಲ್ಲ ಎಂದು ಮೈತ್ರೇಯ ಸಂಘ್ವಿ ಎಂಬವರು ಟ್ವೀಟ್ ಮಾಡಿದ್ದಾರೆ.

ಇದೇ ರೀತಿ ಸಾವಿರಾರು ಮಂದಿ ತೇಜಸ್ವಿ ಸೂರ್ಯ ಹಾಗೂ ಮೂವರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News