ತೇಜಸ್ವಿ ಸೂರ್ಯ, ಮೂವರು ಶಾಸಕರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಬೇಕು: ನ್ಯಾಯವಾದಿ ವಿನಯ್ ಶ್ರೀನಿವಾಸ್

Update: 2021-05-06 04:07 GMT

ಬೆಂಗಳೂರು, ಮೇ 5: ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿಯ ಬೆಡ್ ಹಂಚಿಕೆ ವ್ಯವಸ್ಥೆಯ ಬಗ್ಗೆ ಮಂಗಳವಾರ ಮಾತನಾಡಿದ್ದರು. ಆದರೆ ಇದರಲ್ಲಿ ಅವರು ಕೋಮುವಾದೀಕರಣ ಮಾಡಿದ್ದಾರೆ. ಮುಸ್ಲಿಮರ ಹೆಸರನ್ನು ಮಾತ್ರ ಹೇಳುವ ಮೂಲಕ ಕೋಮುದ್ವೇಷ ಸೃಷ್ಟಿಸುವ ಯತ್ನ ಮಾಡಿದ್ದಾರೆ. ಅವರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಬೇಕು ಎಂದು ವಕೀಲರು, ಸಾಮಾಜಿಕ ಹೋರಾಟಗಾರ ವಿನಯ್ ಶ್ರೀನಿವಾಸ್ ತಿಳಿಸಿದ್ದಾರೆ.

ಈ ಬಗ್ಗೆ ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, ಬೆಡ್ ಹಂಚಿಕೆ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ಗಂಭೀರ ಆರೋಪಗಳನ್ನು ಮಾಡಿದ್ದರು. ಬೆಂಗಳೂರು ದಕ್ಷಿಣ ವಲಯ ವಾರ್ ರೂಂನಲ್ಲಿ 200ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು, ಆ ಪೈಕಿ 17 ಮಂದಿ ಮುಸ್ಲಿಮರ ಹೆಸರನ್ನಷ್ಟೇ ಉಲ್ಲೇಖಿಸಿದ್ದು, ಮದರಸಾಕ್ಕೆ ನೇಮಕ ಮಾಡ್ಕೊಂಡಿದ್ದೀರಾ? ಎಂದು ಪ್ರಶ್ನಿಸಿರುವುದು ಕೋಮುದ್ವೇಷ ಸೃಷ್ಟಿಸುವ ಯತ್ನ ಎಂದು ತಿಳಿಸಿದ್ದಾರೆ.

ಇದು ಐಪಿಸಿ ಸೆಕ್ಷನ್ 153'A' ಮತ್ತು 505 (2)ರ ಅನ್ವಯ ಕಾನೂನುಬಾಹಿರ, ಘೋರ ಅಪರಾಧ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ 24 ಮಂದಿ ಸಾವನ್ನಪ್ಪಿದ ಘಟನೆಯಲ್ಲಿ ಬಿಜೆಪಿ ಸರಕಾರದ ವೈಫಲ್ಯವನ್ನು ಮರೆಮಾಚಲು ಮುಸ್ಲಿಮರ ವಿರುದ್ಧ ಆರೋಪ ಮಾಡಲಾಗುತ್ತಿದೆ. ಹಾಸಿಗೆ, ಆಕ್ಸಿಜನ್ ಕೊಡಲು ಕೇಂದ್ರ-ರಾಜ್ಯ ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಸಿಎಎ, ಎನ್‍ಆರ್‍ಸಿ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಪ್ಲೇಕಾರ್ಡ್ ಹಿಡಿದ ಕಾರಣಕ್ಕೆ, ಪದ್ಯ ಹಾಡಿದ್ದಕ್ಕೆ ನಗರ ಪೊಲೀಸ್ ಆಯುಕ್ತರು ದೂರು ದಾಖಲಿಸಿದ್ದರು. ಇದೀಗ ಸಂಸದರು ಬಹಿರಂಗವಾಗಿ ಕೋಮುವಾದೀಕರಣ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯವರು ತೇಜಸ್ವಿ ಸಹಿತ ಬಿಜೆಪಿ ಮುಖಂಡರ ವಿರುದ್ಧ ಏಕೆ ಎಫ್‍ಐಆರ್ ದಾಖಲಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮುಸ್ಲಿಮರು ಜಾತಿ ಧರ್ಮ ನೋಡದೆ ಊಟ ಇಲ್ಲದವರಿಗೆ ಊಟ ಕೊಟ್ಟಿದ್ದಾರೆ. ಇನ್ನಿತರ ರೂಪದಲ್ಲೂ ಸಹಾಯ ಮಾಡಿದ್ದಾರೆ. ಮೃತದೇಹ ಮುಟ್ಟಲು ಕುಟುಂಬಸ್ಥರೂ ಬಾರದಿದ್ದಾಗ ಮುಸ್ಲಿಮರು ಬಂದು ಮಣ್ಣು ಮಾಡಿದ್ದು ನೋಡಿದ್ದೇವೆ. ಅವರ ಹೆಸರನ್ನು ಏಕೆ ಇವರು ಹೇಳುತ್ತಿಲ್ಲ. ಈ ಹಗರಣದ ವಿಷಯದಲ್ಲಿ ಸಂಸದರು ಕೋಮುವಾಧೀಕರಣ ಮಾಡಿದ್ದಾರೆ. ಪೊಲೀಸರು ತೇಜಸ್ವಿ ಸಹಿತ ಮೂವರು ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಹಾಗೂ ಸತೀಶ್ ರೆಡ್ಡಿ ವಿರುದ್ಧ ತಕ್ಷಣವೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News