ಆಸ್ಪತ್ರೆಗಳಲ್ಲಿ ಖಾಲಿ ಇರುವ ಬೆಡ್‍ಗಳ ಬಗ್ಗೆ ಪ್ರತಿದಿನ ಬುಲೆಟಿನ್ ಬಿಡುಗಡೆ: ಗೃಹ ಸಚಿವ ಬೊಮ್ಮಾಯಿ

Update: 2021-05-05 15:23 GMT

ಬೆಂಗಳೂರು, ಮೇ 5: ಪ್ರತಿದಿನ ಹೆಲ್ತ್ ಬುಲೆಟಿನ್ ಮಾದರಿಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆಗೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಒಟ್ಟು ಬೆಡ್‍ಗಳ ಕುರಿತು ಬುಲೆಟಿನ್ ಪ್ರಕಟಿಸುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬುಧವಾರ ಬೆಂಗಳೂರಿನ ಆನಂದ ರಾವ್ ವೃತ್ತದಲ್ಲಿರುವ ಆರೋಗ್ಯಸೌಧದಲ್ಲಿನ ಕರ್ನಾಟಕ ವಾರ್ ರೂಮಿಗೆ (ಬೆಂಗಳೂರು ಹೊರತುಪಡಿಸಿ) ಭೇಟಿ ನೀಡಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕೋವಿಡ್ ಸೋಂಕಿತರಿಗೆ ಸಮರ್ಪಕವಾಗಿ ಹಾಸಿಗೆ ಲಭ್ಯವಾಗುತ್ತಿಲ್ಲ. ಹಾಸಿಗೆ ನೀಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಾನು ಮತ್ತು ಕಂದಾಯ ಆರ್.ಅಶೋಕ್ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಂಡವನ್ನು ರಚನೆ ಮಾಡಿದ್ದಾರೆ ಎಂದರು.

ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆ ಲಭ್ಯತೆ, ಬಳಕೆಯಾಗಿರುವ ಬೆಡ್‍ಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಕೋವಿಡ್ ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆಂದ ಅವರು, ರಾಜ್ಯದಲ್ಲಿ ಪ್ರತಿದಿನ ಎಷ್ಟು ಬೆಡ್‍ಗಳು ಖಾಲಿಯಿವೆ, ಎಷ್ಟು ಬೆಡ್‍ಗಳು ಭರ್ತಿಯಾಗಿವೆ. ಯಾವ ಯಾವ ವಿಭಾಗದ ಬೆಡ್‍ಗಳು ಭರ್ತಿಯಾಗಿವೆ ಎಂಬುದರ ಕುರಿತು ಪಾರದರ್ಶಕವಾದ ಬುಲೆಟಿನ್ ಅನ್ನು ಬಿಡುಗಡೆ ಮಾಡಲಾಗುವುದು. ಎರಡು-ಮೂರು ದಿನಗಳಲ್ಲಿ ಇದಕ್ಕೆ ಒಂದು ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್ ಮತ್ತು ವಾರ್ ರೂಂ ಮುಖ್ಯಸ್ಥರೂ ಆಗಿರುವ ಸಚಿವ ಅರವಿಂದ್ ಲಿಂಬಾವಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

`ನಮ್ಮ ದೃಷ್ಟಿಯಲ್ಲಿ ಕಮ್ಯುನಲ್ ಎಂಬುದು ಯಾವುದು ಇಲ್ಲ. ಅಪರಾಧಿ ಅಪರಾಧಿ ಅಷ್ಟೇ. ತಪ್ಪಿತಸ್ಥರನ್ನು ಪತ್ತೆ ಮಾಡುವುದು ನಮ್ಮ ಕೆಲಸ. ಅವರು ಯಾರೇ ಆಗಿರಲಿ'

-ಬಸವರಾಜ್ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News