ಪ್ರಕರಣದಿಂದ ಹಿಂದೆ ಸರಿಯುವಂತೆ ಒತ್ತಡ, ಕೋಟ್ಯಂತರ ರೂ. ಆಮಿಷ: ಸಂತ್ರಸ್ತ ಯುವತಿ ಆರೋಪ

Update: 2021-05-05 15:57 GMT

ಬೆಂಗಳೂರು, ಮೇ 5: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಶ್ಲೀಲ ಸೀಡಿ ಪ್ರಕರಣದಿಂದ ಹಿಂದೆ ಸರಿಯುವಂತೆ ನನ್ನ ವಕೀಲರಿಗೆ ರಮೇಶ ಜಾರಕಿಹೊಳಿ ಕಡೆಯವರು ಒತ್ತಡ ಹೇರುತ್ತಿದ್ದು, ಇದಕ್ಕಾಗಿ ಕೋಟ್ಯಂತರ ರೂ. ನೀಡುವುದಾಗಿ ಆಮಿಷವೊಡ್ಡುತ್ತಿದ್ದಾರೆಂದು ಆರೋಪಿಸಿ ಸಂತ್ರಸ್ತ ಯುವತಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಪತ್ರ ಬರೆದಿದ್ದಾರೆ.

ಬುಧವಾರ ಪತ್ರ ಬರೆದಿದ್ದು, ಕೋವಿಡ್ ನೆಪದಲ್ಲಿ ವಿಚಾರಣೆಗೆ ರಮೇಶ ಜಾರಕಿಹೊಳಿ ಗೈರಾಗುತ್ತಿದ್ದಾರೆ. ಈ ಸಂದರ್ಭ ದುರುಪಯೋಗ ಮಾಡಿಕೊಂಡು, ಸಾಕ್ಷ್ಯ ನಾಶ ಹಾಗೂ ಪ್ರಕರಣದಿಂದ ಹಿಂದೆ ಸರಿಸಲು ಒತ್ತಡ ತರುತ್ತಿದ್ದಾರೆ. ನನ್ನ ವಕೀಲ ಕೆ.ಎನ್.ಜಗದೀಶ್ ಅವರಿಗೆ ಪ್ರಕರಣದಿಂದ ಹಿಂದೆ ಸರಿಯಲು 15 ದಿನಗಳಿಂದ ಅನಾಮಧೇಯ ವ್ಯಕ್ತಿಗಳು ಆಮಿಷ ನೀಡುತ್ತಿದ್ದಾರೆ ಎಂದು ಯುವತಿ ತಿಳಿಸಿದ್ದಾರೆ.

ಈ ವಿಚಾರವನ್ನು ವಕೀಲರು ನನ್ನ ಗಮನಕ್ಕೆ ತಂದಿದ್ದಾರೆ ಎಂದಿರುವ ಯುವತಿ, ಮತ್ತೊಬ್ಬ ವಕೀಲ ಸೂರ್ಯ ಮುಕುಂದರಾಜ್ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿ 'ನಾನು ಪ್ರದೀಪ್, ಅಮರನಾಥ್ ಜಾರಕಿಹೊಳಿ ಅವರ ಸ್ನೇಹಿತ. ನೀವು ಯುವತಿಗೆ ಪ್ರಕರಣ ವಾಪಸ್ ಪಡೆಯಲು ತಿಳಿಸಿದರೆ, ನಿಮಗೆ ದೊಡ್ಡ ಕೊಡುಗೆ ನೀಡಲಾಗುವುದು' ಎಂದು ಹೇಳಿದ್ದಾರೆಂದು ಆರೋಪಿಸಿದ್ದಾರೆ.

ಗಂಭೀರ ಸ್ವರೂಪದ ಪ್ರಕರಣವಾಗಿದ್ದರೂ, ವಕೀಲರ ಮುಖಾಂತರ ನನ್ನ ಮೇಲೆ ಒತ್ತಡ ತರಲು ರಮೇಶ ಮುಂದಾಗಿದ್ದಾರೆ. ಆಮಿಷ ನೀಡಲು ಕರೆ ಮಾಡಿದ್ದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸಾಕ್ಷ್ಯ ನಾಶ ಹಾಗೂ ಪ್ರಕರಣದ ಮೇಲೆ ಪ್ರಭಾವ ಬೀರುತ್ತಿರುವ ರಮೇಶ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News