ಪ್ರತಿ ಜೀವವೂ ಅಮೂಲ್ಯ,ಎಲ್ಲ ಆಸ್ಪತ್ರೆಗಳಲ್ಲಿ 24x7 ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿ:ರಾಜ್ಯಗಳಿಗೆ ಕೇಂದ್ರದ ಸೂಚನೆ

Update: 2021-05-05 16:27 GMT

ಹೊಸದಿಲ್ಲಿ,ಮೇ 5: ಕೋವಿಡ್-19 ಆಸ್ಪತ್ರೆಗಳಲ್ಲಿ ಒಂದರ ಹಿಂದೊಂದರಂತೆ ಅಗ್ನಿ ದುರಂತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ,ನಿರ್ದಿಷ್ಟವಾಗಿ ಕೋವಿಡ್-19 ಆಸ್ಪತ್ರೆಗಳಲ್ಲಿ ಅಗ್ನಿ ಅವಘಡಗಳು ನಡೆಯದಂತೆ ನೋಡಿಕೊಳ್ಳುವಂತೆ ಸೂಚಿಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬುಧವಾರ ಪತ್ರವನ್ನು ಬರೆದಿದೆ.

ಅಧಿಕ ಉಷ್ಣತೆ ಅಥವಾ ನಿರ್ವಹಣೆಯ ಕೊರತೆ ಅಥವಾ ಆಂತರಿಕ ವೈರಿಂಗ್ಗಳ ಮೇಲೆ ಅಧಿಕ ಒತ್ತಡದಿಂದಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಘಟನೆಗಳು ನಡೆಯುತ್ತಿವೆ. ಆರೋಗ್ಯ, ಅಗ್ನಿಶಾಮಕ ಮತ್ತು ವಿದ್ಯುತ್ ಇಲಾಖೆಗಳ ಅಧಿಕಾರಿಗಳಿಂದ ಎಲ್ಲ ಆಸ್ಪತ್ರೆಗಳಲ್ಲಿ ಸಮಗ್ರ ಪುನರ್ಪರಿಶೀಲನೆ ನಡೆಯಬೇಕು ಎಂದು ತಿಳಿಸಿರುವ ಸಚಿವಾಲಯವು, ಕ್ಷೇತ್ರಾಧಿಕಾರಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ಆಂತರಿಕ ವೈರಿಂಗ್ ಗಳು ಮತ್ತು ಸುರಕ್ಷತಾ ಮಾರ್ಗಸೂಚಿಗಳಂತೆ ಕಾರ್ಯನಿರತ ಸುರಕ್ಷತಾ ಉಪಕರಣದ ಲಭ್ಯತೆಯನ್ನು ಪರಿಶೀಲಿಸಬೆಕು ಎಂದು ವಿವಿಧ ಸ್ತರಗಳಲ್ಲಿಯ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಗಳನ್ನು ನೀಡುವಂತೆ ಮತ್ತು ಯಾವುದೇ ಲೋಪಗಳು ಕಂಡು ಬಂದರೆ ತಕ್ಷಣ ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಪ್ರತಿಯೊಂದು ಜೀವವೂ ಅಮೂಲ್ಯ ಎಂದು ಒತ್ತಿ ಹೇಳಿರುವ ಕೇಂದ್ರವು,ಕೋವಿಡ್ ಆಸ್ಪತ್ರೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನವರು ಐಸಿಯುಗಳಲ್ಲಿ,ಆಮ್ಲಜನಕ ವ್ಯವಸ್ಥೆಯ ಹಾಸಿಗೆಗಳಲ್ಲಿ ಮತ್ತು ವೆಂಟಿಲೇಟರ್ಗಳಲ್ಲಿದ್ದಾರೆ. ಈ ಎಲ್ಲ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆಯಿರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News