ಎಚ್.ವಿಶ್ವನಾಥ್ ಕೊರೋನ ವೈರಸ್‍ಗಿಂತಲೂ ಅಪಾಯಕಾರಿ ಎಂದ ಬಿಜೆಪಿ ಶಾಸಕ !

Update: 2021-05-05 17:23 GMT

ಬೆಂಗಳೂರು, ಮೇ 5: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಸರಕಾರದ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡುತ್ತಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕೊರೋನ ವೈರಸ್‍ಗಿಂತಲೂ ಅಪಾಯಕಾರಿ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿದ್ದುಕೊಂಡು ಪಕ್ಷ ಮತ್ತು ಸರಕಾರದ ವಿರುದ್ಧ ಹೇಳಿಕೆ ನೀಡುವುದನ್ನು ಬಿಡಿ. ಇಲ್ಲವಾದರೆ, ಪಕ್ಷದಿಂದ ಹೊರ ಹೋಗಿ ಎಂದು ಎಚ್.ವಿಶ್ವನಾಥ್‍ಗೆ ತಾಕೀತು ಮಾಡಿದರು.

ಬೇರೆ ಪಕ್ಷಕ್ಕೆ ರಾಜೀನಾಮೆ ನೀಡಿ ಬಂದ ನಿಮಗೆ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಪಕ್ಷ ಹೇಳಿದ್ದರೂ ಹಠಕ್ಕೆ ಬಿದ್ದು ಸ್ಪರ್ಧಿಸಿ ಹೀನಾಯವಾಗಿ ಸೋತಿರಿ. ಸೋಲನುಭವಿಸಿದ ನಿಮಗೆ ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಅಗತ್ಯವಿರಲಿಲ್ಲ. ಆದರೆ, ಕರೆತಂದು ಟಿಕೆಟ್ ಕೊಟ್ಟು ನಿಮಗೆ ಗೌರವ ಕೊಟ್ಟು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸರಕಾರದ ವಿರುದ್ಧವೇ ಮಾತನಾಡುವ ಮೂಲಕ ಪಕ್ಷದ್ರೋಹ ಮಾಡುತ್ತಿದ್ದೀರಿ. ನಿಮ್ಮ ಅಗತ್ಯ ನಮ್ಮ ಪಕ್ಷಕ್ಕಿಲ್ಲ ಎಂದು ಅವರು ಕಿಡಿಗಾರಿದರು.

ಈ ಹಿಂದೆ ಸಚಿವರಾಗಿದ್ದರು ಎಂಬ ಕಾರಣಕ್ಕೆ ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟಿರುವ ಸ್ಥಾನಮಾನವನ್ನು ಅನುಭವಿಸುತ್ತಾ ಉಂಡ ಮನೆಗೇ ದ್ರೋಹ ಬಗೆಯುವ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯವಾಗಿದೆ. ನೀವು ಒಂದು ರೀತಿಯಲ್ಲಿ ಕೊರೋನ ವೈರಸ್ ಗಿಂತಲೂ ಅಪಾಯಕಾರಿ ಎಂದು ಅವರು ವಾಗ್ದಾಳಿ ನಡೆಸಿದರು.

ನೀವು ಚುನಾವಣೆ ರಾಜಕೀಯದಲ್ಲಿ ಸವಕಲು ನಾಣ್ಯವಾಗಿದ್ದೀರಿ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರು ಇಲ್ಲದೇ ಇದ್ದಿದ್ದರೆ ನೀವು ರಾಜಕೀಯ ಸನ್ಯಾಸತ್ವ ಪಡೆಯುತ್ತಿದ್ದಿರಿ ಎಂಬುದನ್ನು ನೆನಪು ಮಾಡಿಕೊಳ್ಳಿ. ಚುನಾವಣೆಯಲ್ಲಿ ಸೋತ ನಿಮಗೆ ವಿಧಾನಪರಿಷತ್ ಸ್ಥಾನ ಸಿಕ್ಕಿರುವುದೇ ದೊಡ್ಡದು. ಆದರೆ, ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನೀವು ಪಕ್ಷದ ವಿರುದ್ಧವೇ ಮನಸಿಗೆ ಬಂದಂತೆ ಟೀಕೆ ಮಾಡುತ್ತಿರುವುದನ್ನು ಗಮನಿಸಿದರೆ ನಿಮ್ಮ ಮನಸ್ಥಿತಿ ಯಾವ ಹಂತದಲ್ಲಿದೆ ಎಂಬುದು ರಾಜ್ಯದ ಜನತೆಗೆ ತಿಳಿಯುತ್ತಿದೆ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಕ್ಕೆ ಮಾರ್ಗದರ್ಶನ, ಸಲಹೆ ನೀಡಲು ನಿಮ್ಮ ಹಿರಿತನವನ್ನು ಬಳಸಿ. ಅದನ್ನು ಬಿಟ್ಟು ನಾನೇ ಮೇಧಾವಿ ಎಂದು ಫೋಸ್ ಕೊಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಾ ಬರುತ್ತಿರುವ ನಿಮ್ಮ ಧೋರಣೆಯನ್ನು ಗಮನಿಸಿದರೆ ನೀವೊಬ್ಬ ಪ್ರಚಾರ ಪ್ರಿಯ ಮತ್ತು ಪೇಪರ್ ಟೈಗರ್ ಎಂಬುದು ಸಾಬೀತಾಗುತ್ತಿದೆ. ಇದೇ ರೀತಿ ಹೇಳಿಕೆ ನೀಡುತ್ತಾ ಹೋದರೆ ನಿಮ್ಮ ಅಸ್ತಿತ್ವ ಮತ್ತಷ್ಟು ಅವನತಿಗೆ ತಳ್ಳಲ್ಪಡುತ್ತದೆ ಎಂಬುದನ್ನು ಮೊದಲು ಅರಿಯಿರಿ ಎಂದು ಅವರು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News