ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತಿದೆ, ಮುಖ್ಯಮಂತ್ರಿಯೂ ಸರಿ ಇಲ್ಲ: ಎಚ್.ವಿಶ್ವನಾಥ್ ವಾಗ್ದಾಳಿ

Update: 2021-05-05 17:34 GMT

ಮೈಸೂರು, ಮೇ.5: ಕೊರೋನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಜವಾಬ್ದಾರಿ ಮರೆತಿದ್ದು, ನಿಮಗೆ ಕಣ್ಣು ಕಾಣುವುದಿಲ್ಲ, ಕಿವಿ ಕೇಳಿಸಲ್ಲ, ನಿಮ್ಮನ್ನು ಇಟ್ಟುಕೊಂಡು ನಾವೇನು ಮಾಡಲು ಸಾಧ್ಯ? ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೇ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಗರದ ಜಿ.ಪಂ.ಸಭಾಂಗಣದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಡೆದ ಶಾಸಕರ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತಿದೆ. ಮುಖ್ಯಮಂತ್ರಿಯೂ ಸರಿ ಇಲ್ಲ. ಮುಖ್ಯಮಂತ್ರಿ ಬಳಿ ಯಾವ ಖಾತೆ ಹೋದರೂ ಅದು ಸತ್ತು ಹೋಯ್ತು ಅಂತ ಅರ್ಥ. ನೀವೇ ಬಿಬಿಎಂಪಿ ಸಚಿವರಾಗಿದ್ದೀರಿ. ರಾಜಧಾನಿ ಬೆಂಗಳೂರು ಕೋವಿಡ್‍ನಿಂದ ತತ್ತರಿಸಿ ಹೋಗುತ್ತಿದೆ. ನೀವು ಎಂದಾದರೂ ಆಚೆ ಬಂದು ನೋಡಿದ್ದೀರಾ? ಬಿಬಿಎಂಪಿಗೆ ಹೋಗಿ ಸಭೆ ಮಾಡಿದ್ದೀರಾ ? ಇಂಧನ ಖಾತೆ ನಿಮ್ಮ ಬಳಿಯೇ ಇದೆ, ಡಿಪಿಆರ್ ನಿಮ್ಮ ಬಳಿಯೇ ಇದೆ. ಗುಪ್ತಚರ ಇಲಾಖೆ ನಿಮ್ಮ ಬಳಿಯೇ ಇದೆ. ಎಲ್ಲ ಖಾತೆಯನ್ನೂ ಇಟ್ಟುಕೊಂಡು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಸರ್ಕಾರಿ ಆಸ್ಪತ್ರೆಯನ್ನ ಸರಿಯಾಗಿ ಬಳಕೆ ಮಾಡಿಕೊಂಡರೆ ಖಾಸಗಿ ಆಸ್ಪತ್ರೆಗೆ ಜನರು ಯಾಕೆ ಹೋಗುತ್ತಾರೆ, ಜನರನ್ನ ತೆಗೆದುಕೊಂಡು ಹೋಗಿ ಬೇರೆ ಆಸ್ಪತ್ರೆಯಲ್ಲಿ ಮಲಗಿಸ್ತಾ ಇದ್ದಾರೆ. ಇದು ಆರೋಗ್ಯ ಇಲಾಖೆ ವೈಫಲ್ಯ ಅಲ್ಲ, ಇಡೀ ಸರ್ಕಾರವೇ ವಿಫಲವಾಗಿದೆ. ಮೊದಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಬೇಕು. ಕನಿಷ್ಠ ಪಕ್ಷ 15 ದಿನದ ಮಟ್ಟಿಗಾದರೂ ಲಾಕ್‍ಡೌನ್ ಮಾಡಬೇಕು. ಶಾಸಕರ, ಸಚಿವರ ಗಾರ್ಮೆಂಟ್ಸ್ ಇದೆ. ಹಾಗಾಗಿ ಇವರು ಲಾಕ್‍ಡೌನ್ ಮಾಡೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದರೆ ಈಗ ಕೊರೋನ ದಂಧೆ ಆಗುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧವೇ ಹರಿಹಾಯ್ದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಷ್ಟ್ರಮಟ್ಟದ ಅಧಿಕಾರಿಗಳ ಜೊತೆ ಮಾಹಿತಿ ಪಡೆದುಕೊಂಡಿದ್ದರು. ಆದರೆ ಇದೀಗ ಅವರ ಖಾತೆಯನ್ನು ಹಂಚು ಮೂಲಕ ದ್ರೌಪತಿ ವಸ್ತ್ರಾಭರಣ ರೀತಿ ಮಾಡಿದ್ದಾರೆ. ಅವರ ಎಲ್ಲ ಅಧಿಕಾರ ಕಿತ್ತು ಜಗದೀಶ್ ಶೆಟ್ಟರ್, ಅಶ್ವಥನಾರಾಯಣ್, ಆರ್.ಅಶೋಕ್ ಗೆ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಆ ತೇಜಸ್ವಿ ಸೂರ್ಯ ಅವರನ್ನ ಅಭಿನಂದಿಸಬೇಕು. ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಆ ಬಿಬಿಎಂಪಿಯಲ್ಲಿ ಎಷ್ಟು ಜನ ಆಯುಕ್ತರು ಹೋದರು ಬಂದರು ಇನ್ನೆಷ್ಟು ಆಯುಕ್ತರನ್ನ ಬದಲಾವಣೆ ಮಾಡುತ್ತಾರೋ ಗೊತ್ತಿಲ್ಲ. ಗೌರವ ಗುಪ್ತಾ 10 ಪರ್ಸೆಂಟ್ ಗುಪ್ತಾ ಎಂದೇ ಪ್ರಸಿದ್ದಿ ಎಂದು ಕಿಡಿಕಾರಿದರು.

ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಶ್ವನಾಥ್, ಸರ್ಕಾರದ ನಿರ್ಧಾರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದರು.

ಇದು ಬಹಳ ದುರದೃಷ್ಟಕರ ವಿಷಯ. ಚಾಮರಾಜನಗರದ ಡಿಸಿ ಯಾರೋ ಹುಡುಗರನ್ನ ಇರಿಸಿಕೊಂಡು ಕೂಗಿಸಿದ್ದಾರೆ. ಮೈಸೂರು ಜಿಲ್ಲೆ ಮೇಲೆ ಅಪಾದನೆ ಮಾಡಿಸಿದ್ದಾರೆ. ನಾನು ಕೂಡ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದ್ದೇನೆ. ಇದನ್ನ ಸ್ವತಃ ನ್ಯಾಯಾಲಯವೇ ತನಿಖೆಗೆ ಸೂಚಿಸಿದೆ. ಚಾಮರಾಜನಗರದ ಈ ಆರೋಪದಿಂದ ಮೈಸೂರು ಹೊರ ಬರಲಿದೆ ಎಂದಿದ್ದಾರೆ.

ಸರ್ಕಾರ ನೇಮಕ ಮಾಡಿರುವ ಐಎಎಸ್ ಆಫೀಸರ್ ನಿಂದ ನ್ಯಾಯ ಸಿಗಲ್ಲ. ಆ ಅಧಿಕಾರಿ ಸರ್ಕಾರದ ಒಂದು ಭಾಗವಾಗಿದ್ದಾರೆ. ಹಾಗಾಗಿ ಅವರಿಂದ ನ್ಯಾಯ ಸಿಗಲ್ಲ. ಅವರು ಬಂದರೂ ಸಹ ಮೂರೇ ಆಕ್ಸಿಜನ್ ಸಾವು ಅಂತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News