ಮಹಾರಾಷ್ಟ್ರ, ತೆಲಂಗಾಣಕ್ಕೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಯತ್ನ: ಅಧಿಕಾರಿಗಳಿಂದ ದಿಢೀರ್ ದಾಳಿ

Update: 2021-05-05 17:40 GMT

ಕಲಬುರಗಿ, ಮೇ 5: ರಾಜ್ಯಕ್ಕೆ ಪೂರೈಸಬೇಕಾದ ಆಕ್ಸಿಜನ್ ಸಿಲಿಂಡರ್ ಗಳನ್ನು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಕ್ಕೆ ಕಾಳಸಂತೆಯಲ್ಲಿ ಮಾರುತ್ತಿದ್ದ ಆಕ್ಸಿಜನ್ ಇಂಡಸ್ಟ್ರಿ ಮೇಲೆ ಕಲಬುರಗಿ ಜಿಲ್ಲಾಡಳಿತ ದಿಢೀರ್ ದಾಳಿ ನಡೆಸಿ ಸಿಲಿಂಡರ್ ವಶಪಡಿಸಿಕೊಂಡಿರುವ ಘಟನೆ ತಡರಾತ್ರಿ ನಡೆದಿದೆ.

ಎರಡು ದಿನಗಳ ಹಿಂದೆಯಷ್ಟೇ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಅಕ್ರಮಗಳ ಮೇಲೆ ನಿಗಾವಹಿಸುವಂತೆ ನಿರ್ದೇಶನ ನೀಡಿದ ಬೆನ್ನಲ್ಲೇ ಈ ದಾಳಿ ನಡೆಸಲಾಗಿದೆ.

ದಾಳಿ ಸಂದರ್ಭದಲ್ಲಿ ಆಕ್ಸಿಜನ್ ತುಂಬಿದ ಕೆಲವು ಸಿಲಿಂಡರ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಕಲಬುರಗಿ ಜಿಲ್ಲೆಯ ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ ಆಕ್ಸಿಜನ್ ಇಂಡಸ್ಟ್ರಿ ಘಟಕದಿಂದ ನೆರೆಯ ಮಹಾರಾಷ್ಟ್ರ, ತೆಲಂಗಾಣಕ್ಕೆ ಅಕ್ರಮವಾಗಿ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುತ್ತಿದೆ ಎಂಬ ದೂರು ಜಿಲ್ಲಾಡಳಿತಕ್ಕೆ ಬಂದಿತ್ತು.

ಆ ಮಾಹಿತಿಯನ್ನು ಆಧರಿಸಿ ಜಿಲ್ಲಾಡಳಿತ ನಿನ್ನೆ ರಾತ್ರಿ ವಿಜಯ ಆಕ್ಸಿಜನ್ ಇಂಡಸ್ಟ್ರಿ ಮೇಲೆ ದಾಳಿ ನಡೆಸಿ ಆಕ್ರಮವನ್ನು ಬಯಲಿಗೆಳೆದಿದೆ. ಕಾಳ ಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಇಂಡಸ್ಟ್ರಿಯನ್ನು ವಶಕ್ಕೆ ಪಡೆದಿದೆ. ಎಸಿ ರಾಮಚಂದ್ರ ಗಡದೆ ಅವರ ಸಮ್ಮುಖದಲ್ಲಿ ನಡೆದ ಈ ದಾಳಿಯಿಂದಾಗಿ ಅಕ್ರಮ ಬಯಲಿಗೆ ಬಂದಿದೆ.

ಈ ದಾಳಿ ಕುರಿತಾಗಿ ಹೇಳಿಕೆ ನೀಡಿರುವ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಜನತೆ ಸಂಕಷ್ಟದ ಸ್ಥಿತಿಯಲ್ಲಿರುವಾಗ ಹೆಚ್ಚಿನ ಹಣದ ಆಸೆಗಾಗಿ ಯಾರೊಬ್ಬರೂ ಕೂಡ ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಅನೇಕ ಕಡೆ ಸಕಾಲಕ್ಕೆ ಸರಿಯಾಗಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸಿಗದೆ ಸಾವು-ನೋವು ಸಂಭವಿಸಿದೆ. ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿ ಆಕ್ಸಿಜನ್ ತುಂಬಾ ಅತ್ಯಗತ್ಯ. ಜೀವ ಉಳಿಸುವ ಸಂಜೀವಿನಿ ಎಂದೇ ಹೇಳಲಾಗುವ ಇದನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಜನತೆಯಲ್ಲಿ ಅವರು ಪ್ರಾರ್ಥಿಸಿದ್ದಾರೆ.

ಯಾರಾದರೂ ಹಣದ ಆಸೆಗಾಗಿ ಅಕ್ರಮವಾಗಿ ಸಿಲಿಂಡರ್‍ಗಳನ್ನು ಸಂಗ್ರಹಿಸಿಕೊಂಡಿದ್ದರೆ ಕೂಡಲೇ ಜಿಲ್ಲಾಡಳಿತಕ್ಕೆ ಹಿಂದಿರುಗಿಸುವಂತೆ ಮನವಿ ಮಾಡಿದ ಅವರು, ಇನ್ನು ಕಳೆದ ರಾತ್ರಿ ಪತ್ತೆಯಾದ ಸಿಲಿಂಡರ್ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳಿರಲಿ, ಇದರಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದು, ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್ ಗಳನ್ನು ಇನ್ನಷ್ಟು ಬಿಗಿಗೊಳಿಸಲು ಸೂಚಿಸಲಾಗಿದೆ. ಇದೇ ವೇಳೆ ತಮ್ಮ ಜೀವನ ಹಂಗು ತೊರೆದು ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಕಲಬುರಗಿ ಜಿಲ್ಲೆಯ ಜಿಲ್ಲಾಡಳಿತಕ್ಕೆ ವಿಶೇಷ ಅಭಿನಂದನೆಗಳು. ಒಳ್ಳೆಯ ಕೆಲಸಗಳಿಗೆ ಯಾವಾಗಲೂ ನಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದು ಮುರುಗೇಶ್ ನಿರಾಣಿ ಮೆಚ್ಚುಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News